ಕಾನ್ಪುರ್ ಬಳಿ ರೈಲ್ವೆಹಳಿಗೆ ಹಾನಿ,ವಿಧ್ವಂಸಕ ಕೃತ್ಯದ ಶಂಕೆ

Update: 2017-01-07 13:44 GMT

ಹೊಸದಿಲ್ಲಿ,ಜ.7: ಕಾನ್ಪುರ ಸಮೀಪ ರೈಲ್ವೆ ಹಳಿಯ ಫಿಷ್ ಪ್ಲೇಟ್ ಮತ್ತು ಇಲಾಸ್ಟಿಕ್ ಕ್ಲಿಪ್‌ಗಳನ್ನು ಕಿತ್ತು ಹಾಕಿರುವ ಆಘಾತಕಾರಿ ವಿದ್ಯಮಾನ ಜ.1ರಂದು ಬೆಳಕಿಗೆ ಬಂದಿದ್ದು, ಇದೊಂದು ವಿಧ್ವಂಸಕ ಕೃತ್ಯವೆಂದು ಶಂಕಿಸಿರುವ ರೈಲ್ವೆಯು ಈ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಬಯಸಿದೆ.

ಗ್ಯಾಂಗ್‌ಮನ್‌ಗಳ ಗಸ್ತುತಂಡವೊಂದು ಈ ಸಂಚಾರನಿಬಿಡ ಮಾರ್ಗದಲ್ಲಿ ದುಷ್ಕರ್ಮಿಗಳ ಈ ಕೃತ್ಯವನ್ನು ಸಕಾಲದಲ್ಲಿ ಪತ್ತೆ ಹಚ್ಚಿದ್ದರಿಂದ ರೈಲು ಹಳಿ ತಪ್ಪುವ ಸಂಭಾವ್ಯ ದುರಂತವೊಂದು ತಪ್ಪಿದೆ.

ಫರುಖಾಬಾದ್-ಕಾನ್ಪುರ್ ಅನ್ವರಗಂಜ್ ವಿಭಾಗದ ಕಲ್ಯಾಣಪುರ ಮತ್ತು ಮಂಧಾನಾ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ. ಫಿಷ್‌ಪ್ಲೇಟ್ ಮತ್ತು ಇಲಾಸ್ಟಿಕ್ ಕ್ಲಿಪ್ ಕಿತ್ತುಹಾಕಿರುವ ಜೊತೆಗೆ ಹ್ಯಾಕ್‌ಸಾ ಬಳಸಿ ಹಳಿಗಳಿಗೆ ಹಾನಿಯನ್ನೂ ಮಾಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರ ಜ.2ರ ಲಕ್ನೋ ರ್ಯಾಲಿಗೆ ಮುನ್ನ ನಡೆದಿರುವ ಈ ಘಟನೆ ವಿಧ್ವಂಸಕ ಕೃತ್ಯವೆಂದು ರೈಲ್ವೆಯು ಶಂಕಿಸಿದೆ. ಈ ಕುರಿತು ವಿವರವಾದ ತನಿಖೆಯನ್ನು ನಡೆಸುವಂತೆ ಕೋರಿ ನಾವು ಸಿಬಿಐಗೆ ಪತ್ರವನ್ನು ಬರೆದಿದ್ದೇವೆ ಎಂದು ಆರ್‌ಪಿಎಫ್ ಡಿಜಿ ಎಸ್.ಕೆ.ಭಗತ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಜ.1 ಘಟನೆಗೆ ಮುನ್ನ ಕಾನ್ಪುರ್ ಸಮೀಪವೇ ನ.20 ಮತ್ತು ಡ.28ರಂದು ಎರಡು ರೈಲುಗಳು ಹಳಿ ತಪ್ಪಿದ್ದವು. ಮೊದಲ ದುರಂತದಲ್ಲಿ ಸುಮಾರು 150 ಜನರು ಮೃತಪಟ್ಟಿದ್ದರೆ, ಎರಡನೇ ಅವಘಡದಲ್ಲಿ 28 ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News