ಜ.31ರಿಂದ ಸಂಸತ್ತಿನ ಬಜೆಟ್ ಅಧಿವೇಶನ
Update: 2017-01-07 23:51 IST
ಹೊಸದಿಲ್ಲಿ,ಜ.7: ಸಂಸತ್ತಿನ ಬಜೆಟ್ ಅಧಿವೇಶನ ಜ.31ರಿಂದ ಆರಂಭಗೊಳ್ಳಲಿದೆ.
ಇದೇ ಮೊದಲ ಬಾರಿಗೆ ರೈಲ್ವೆ ಮುಂಗಡಪತ್ರವನ್ನು ತನ್ನೊಳಗೆ ವಿಲೀನಗೊಳಿಸಿಕೊಂಡಿರುವ ಸಾಮಾನ್ಯ ಮುಂಗಡಪತ್ರವನ್ನು ಫೆ.1ರಂದು ಮಂಡಿಸಲಾ ಗುವುದು. 2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಅಧಿವೇಶನದ ಮೊದಲ ದಿನವೇ ಸಂಸತ್ತಿನಲ್ಲಿ ಮಂಡನೆಯಾಗಲಿದೆ.
ನೋಟು ರದ್ದತಿಯ ಮೊದಲ ಸುತ್ತಿನ ಆಘಾತಗಳು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಮತ್ತು ಮಿನಿ ಮಹಾ ಚುನಾವಣೆ ಎಂದೇ ಪರಿಗಣಿಸಲಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಮಂಡನೆಯಾಗಲಿರುವ ಈ ಮುಂಗಡಪತ್ರದ ಕುರಿತಂತೆ ಗಮನಾರ್ಹ ನಿರೀಕ್ಷೆಗಳು ಗರಿಗೆದರಿಕೊಂಡಿವೆ.