ಪ್ರಧಾನಿ ಮೋದಿ ವಿರುದ್ಧ ಫತ್ವಾ : ಇಮಾಂ ಸೆರೆಗೆ ಬಿಜೆಪಿ ಆಗ್ರಹ
ಕೋಲ್ಕತಾ,ಜ.8: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿ ಕ್ರಮದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಂ ಸೈಯದ್ ಮೊಹಮ್ಮದ್ ನುರೂರ್ ರಹಮಾನ್ ಬರ್ಕತಿ ಅವರು ಮೋದಿ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿಯು ಅವರ ಬಂಧನಕ್ಕೆ ಆಗ್ರಹಿಸಿದೆ.
ನೋಟು ರದ್ದತಿಯಿಂದ ಪ್ರತಿದಿನವೂ ಜನರು ಕಿರುಕುಳಕ್ಕೊಳಗಾಗುತ್ತಿದ್ದಾರೆ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೋಟು ರದ್ದತಿಯ ಮೂಲಕ ಮೋದಿಯವರು ಸಮಾಜಕ್ಕೆ ಮತ್ತು ಅಮಾಯಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಅವರು ಪ್ರಧಾನಿಯಾಗಿ ಮುಂದುವರಿಯುವುದನ್ನು ಯಾರೂ ಬಯಸುತ್ತಿಲ್ಲ ಎಂದು ಅಖಿಲ ಭಾರತ ಮಜ್ಲಿಸ್-ಎ-ಶೂರಾ ಮತ್ತು ಅಖಿಲ ಭಾರತ ಅಲ್ಪಸಂಖ್ಯಾತ ವೇದಿಕೆ ಇಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಇಮಾಂ ಹೇಳಿದರು.
ಅತ್ತ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪ.ಬಂಗಾಲದಲ್ಲಿ ಪಕ್ಷದ ಉಸ್ತುವಾರಿ ಸಿದ್ಧಾರ್ಥನಾಥ ಸಿಂಗ್ ಅವರು ‘ಫತ್ವಾ’ವನ್ನು ತರಾಟೆಗೆತ್ತಿಕೊಂಡರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಮಾಂ ಬಂಧನಕ್ಕೆ ತಕ್ಷಣ ಆದೇಶಿಸಬೇಕೆಂದು ನಾವು ಆಗ್ರಹಿಸುತ್ತೇವೆ. ನಮ್ಮ ಪ್ರಧಾನಿ ವಿರುದ್ಧದ ಫತ್ವಾ ಅತ್ಯಂತ ಖಂಡನೀಯವಾಗಿದೆ. ಇಮಾಂ ಫತ್ವಾ ಹೊರಡಿಸುವಾಗ ತೃಣನೂಲ ಶಾಸಕ ಇದ್ರಿಸ್ ಅಲಿ ಅವರು ಇಮಾಂ ಪಕ್ಕದಲ್ಲಿಯ ಆಸೀನರಾಗಿದ್ದರು ಎಂದು ಅವರು ಹೇಳಿದರು.
ರಾಜ್ಯ ಸರಕಾರವು ಇಮಾಂ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಅವರು, ಇದು ಬಿಜೆಪಿ-ಟಿಎಂಸಿ ನಡುವಿನ ವಿವಾದವಲ್ಲ. ಇದು ಮುಖ್ಯಮಂತ್ರಿಗಳಿಗೆ ನಿಕಟವಾಗಿರುವ ಧಾರ್ಮಿಕ ಮುಖಂಡರೋರ್ವರು ಪ್ರಧಾನಿಯವರಿಗೆ ಮಾಡಿರುವ ಅವಮಾನವಾಗಿದೆ ಎಂದರು.
ಗಡ್ಡವನ್ನು ಬಿಡುವ ವ್ಯಕ್ತಿಗಳು ಮೌಲಾನಾಗಳು, ಸಾಧುಸಂತರು, ಸೂಫಿಗಳು,ಸಿಖ್‌ಗುರುಗಳಂತೆ ಹೆಚ್ಚಾಗಿ ಧಾರ್ಮಿಕ ಸ್ವಭಾವ ಹೊದಿರುತ್ತಾರೆ. ಆದರೆ ಮೋದಿಯವರು ಗಡ್ಡವನ್ನು ಬಿಟ್ಟಿರುವುದು ಢೋಂಗಿಯಾಗಿದೆ. ಅವರು ದೇಶಕ್ಕೆ ಮೋಸ ಮಾಡುತ್ತಿದ್ದಾರೆ ಎನ್ನಲು ತನಗೆ ಹಿಂಜರಿಕೆಯಿಲ್ಲ. ಅವರು ಪ್ರಧಾನಿಯಾಗಿ ಮಂದುವರಿಯಲು ತನ್ನೆಲ್ಲ ವಿಶ್ವಾಸಾರ್ಹತೆಗಳನ್ನು ಕಳೆದುಕೊಂಡಿದ್ದಾರೆ ಎಂದು ಇಮಾಂ ಹೇಳಿದ್ದರು.