ನೋಟು ರದ್ದತಿಗೆ ಮೊದಲಿನ ನಗದು ಠೇವಣಿಗಳ ವಿವರಗಳನ್ನು ನೀಡುವಂತೆ ಬ್ಯಾಂಕುಗಳಿಗೆ ಐಟಿ ಸೂಚನೆ
ಹೊಸದಿಲ್ಲಿ,ಜ.8: ನೋಟು ರದ್ದತಿಗೆ ಮೊದಲಿನ ಆರು ತಿಂಗಳುಗಳ ಬ್ಯಾಂಕ್ ವಹಿವಾಟುಗಳ ವಿಶ್ಲೇಷಣೆಗೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆಯು 2016 ,ಎ.1-ನ.9ರ ನಡುವೆ ಉಳಿತಾಯ ಖಾತೆಗಳಲ್ಲಿ ಮಾಡಲಾದ ನಗದು ಠೇವಣಿಗಳ ವರದಿಯನ್ನು ಸಲ್ಲಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ.
ಅಲ್ಲದೆ ಬ್ಯಾಂಕ್ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಪಾನ್ ಸಂಖ್ಯೆ ಅಥವಾ ಫಾರ್ಮ್ 60 ನೀಡಿರದ ಖಾತೆದಾರರಿಗೆ ಈ ವರ್ಷದ ಫೆ.28ರೊಳಗೆ ಅವುಗಳನ್ನು ಸಲ್ಲಿಸಲು ಸೂಚಿಸುವಂತೆ ಅದು ಬ್ಯಾಂಕುಗಳಿಗೆ ತಿಳಿಸಿದೆ. ಪಾನ್‌ಸಂಖ್ಯೆ ಹೊಂದಿರದ ವ್ಯಕ್ತಿಗಳು ಆ ಬಗ್ಗೆ ಫಾರ್ಮ್ 60ರಲ್ಲಿ ಘೋಷಿಸಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯ ಈ ಸೂಚನೆಯು ಸಹಕಾರಿ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಗೂ ಅನ್ವಯವಾಗುತ್ತದೆ.
ನೋಟು ರದ್ದತಿಯ ಹಿನ್ನೆಲೆಯಲ್ಲಿ ನ.10 ಮತ್ತು ಡಿ.30ರ ನಡುವೆ ಉಳಿತಾಯ ಖಾತೆಗಳಲ್ಲಿ ಮಾಡಲಾಗಿರುವ 2.5 ಲ.ರೂ.ಗೂ ಹೆಚ್ಚಿನ ಮತ್ತು ಚಾಲ್ತಿ ಖಾತೆಗಳಲ್ಲಿ ಮಾಡಲಾಗಿರುವ 12.50 ಲ.ರೂ.ಗೂ ಹೆಚ್ಚಿನ ಎಲ್ಲ ಠೇವಣಿಗಳ ವರದಿಯನ್ನು ತನಗೆ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಯು ಈ ಮೊದಲು ಎಲ್ಲ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಗೆ ಸೂಚಿಸಿತ್ತು. ಜೊತೆಗೆ ಒಂದೇ ದಿನ 50,000 ರೂ.ಗೂ ಹೆಚ್ಚಿನ ಹಣವನ್ನು ಠೇವಣಿ ಮಾಡಿದ್ದರೆ ಅದರ ವಿವರಗಳನ್ನೂ ನೀಡುವಂತೆ ಅದು ತಿಳಿಸಿತ್ತು.