ನೋಟು ಅಮಾನ್ಯ ನಿರ್ಧಾರದ ಬಳಿಕ ಪತ್ತೆಯಾದ ಅಘೋಷಿತ ಆದಾಯ ಇಷ್ಟು !
Update: 2017-01-08 19:20 IST
ಹೊಸದಿಲ್ಲಿ, ಜ.8: ಕಳೆದ ವರ್ಷದ ನವೆಂಬರ್ 8ರಂದು ನೋಟು ಅಮಾನ್ಯ ನಿರ್ಧಾರ ಪ್ರಕಟವಾದ ಬಳಿಕ ಆದಾಯ ತೆರಿಗೆ ಇಲಾಖೆ 1,138 ಶೋಧ, ಸರ್ವೆ ಮತ್ತು ವಿಚಾರಣೆ ಕಾರ್ಯ ನಡೆಸಿ, ತೆರಿಗೆ ತಪ್ಪಿಸಿದ ಮತ್ತು ಹವಾಲಾ ಕಾರ್ಯಾಚರಣೆ ಮತ್ತಿತರ ಕಾರಣಕ್ಕೆ ವಿವಿಧ ಸಂಸ್ಥೆಗಳಿಗೆ 5,184 ನೊಟೀಸ್ ಜಾರಿಗೊಳಿಸಿದೆ . ಅಲ್ಲದೆ 4,807.45 ಕೋಟಿ ಮೊತ್ತದ ಘೋಷಿತ ಆದಾಯ ಪತ್ತೆ ಹಚ್ಚಲಾಗಿದ್ದು 112 ಕೋಟಿ ಮೊತ್ತದ ಹೊಸ ನೋಟುಗಳನ್ನು ಜಫ್ತಿ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇದೇ ಅವಧಿಯಲ್ಲಿ 511.59 ಕೋಟಿ ಮೊತ್ತದ ನಗದು , 97.8 ಕೋಟಿ ಮೊತ್ತದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ವಶ ಪಡಿಸಿಕೊಳ್ಳಲಾದ ಹೊಸ ನೋಟುಗಳಲ್ಲಿ 2 ಸಾವಿರದ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿತ್ತು . ಅಲ್ಲದೆ ಹಣ ಅಕ್ರಮ ಸಾಗಾಟ, ಅಕ್ರಮ ಆಸ್ತಿ ಮುಂತಾದ 526 ಪ್ರಕರಣಗಳ ವಿಚಾರಣೆಯನ್ನು ಸೋದರ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ವಹಿಸಿಕೊಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.