×
Ad

ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅರ್ಧದಲ್ಲೇ ಎದ್ದು ಹೋದ ಸಂಸದ ಯೋಗಿ ಆದಿತ್ಯನಾಥ್

Update: 2017-01-08 21:51 IST

# ಮೋದಿ ಭಾಷಣ ಬಿಟ್ಟು ಹೋದ ಉತ್ತರ ಪ್ರದೇಶದ ಪ್ರಭಾವೀ ನಾಯಕ

ಹೊಸದಿಲ್ಲಿ, ಜ.8: ಇಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ನಿರಾಕರಿಸಿದ ಪಕ್ಷದ ನಾಯಕರ ವರ್ತನೆಯಿಂದ ಸಿಟ್ಟಿಗೆದ್ದ ಉಗ್ರ ಹಿಂದುತ್ವವಾದಿ ಸಂಸದ ಯೋಗಿ ಆದಿತ್ಯನಾಥ್ ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ.

ಉತ್ತರ ಪ್ರದೇಶ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಎರಡು ದಿನ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯದ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಅಧ್ಯಕ್ಷರು ಹಾಗೂ ರಾಷ್ಟ್ರಾದ್ಯಂತದ ಪ್ರತಿನಿಧಿಗಳು ಭಾಗವಹಿಸಿದ್ದರು. ಶುಕ್ರವಾರ ಸಭೆ ಆರಂಭವಾಗಿದ್ದು ಶನಿವಾರದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದರು.

   ಶನಿವಾರದ ಸಭೆಯಲ್ಲಿ ಆದಿತ್ಯನಾಥ್ ಪಾಲ್ಗೊಂಡಿಲ್ಲ ಎಂದು ಆದಿತ್ಯನಾಥ್ ಅವರು ಸ್ಥಾಪಿಸಿರುವ ಹಿಂದೂ ಯುವ ವಾಹಿನಿಯ ಉತ್ತರಪ್ರದೇಶ ಘಟಕಾಧ್ಯಕ್ಷ ಸುನಿಲ್ ಸಿಂಗ್ ತಿಳಿಸಿದ್ದಾರೆ. ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಗೋರಖ್‌ಪುರ ಕ್ಷೇತ್ರದ ಸಂಸದನಾಗಿರುವ ಆದಿತ್ಯನಾಥ್, ಹಿಂದೂ ಯುವ ವಾಹಿನಿ ಎಂಬ ಸಂಘಟನೆಯನ್ನು ಸ್ಥಾಪಿಸುವ ಮೂಲಕ ಈ ಭಾಗದಲ್ಲಿ ಪಕ್ಷದ ಪ್ರಮುಖ ನಾಯಕನಾಗಿ ಹೊರಹೊಮ್ಮುವ ಇರಾದೆ ಹೊಂದಿದ್ದಾರೆ. ಆರೆಸ್ಸೆಸ್ ರೀತಿಯಲ್ಲಿ ಈ ಸಂಘಟನೆ ಕೂಡಾ ರಾಜಕೀಯ ಹಿತಾಸಕ್ತಿಯ ಸಂಘಟನೆಯಾಗಿದೆ.

ಅಲ್ಲದೆ ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿರುವ ಆದಿತ್ಯನಾಥ್, ತಮ್ಮ ಅಪೇಕ್ಷೆಗೆ ಪಕ್ಷದ ಮುಖಂಡರು ಆಸಕ್ತಿ ತೋರದ ಕಾರಣ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಪ್ರಮುಖ ನಾಯಕನಾಗಿ ತನ್ನನ್ನು ಬಿಂಬಿಸಿಲ್ಲ ಮತ್ತು ಕೇಂದ್ರದ ಸಚಿವ ಸಂಪುಟದಲ್ಲಿ ತನಗೆ ಅವಕಾಶ ದೊರಕಿಲ್ಲ ಎಂಬುದೂ ಇವರ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ. ಉತ್ತರಪ್ರದೇಶ ಚುನಾವಣೆಗೆ ಬಿಜೆಪಿ ಪ್ರಕಟಿಸಿದ 27 ಸದಸ್ಯರ ಚುನಾವಣಾ ಸಮಿತಿಯಲ್ಲೂ ಇವರನ್ನು ಕಡೆಗಣಿಸಲಾಗಿದೆ.

ರಾಜ್ಯದ ಪೂರ್ವ ಭಾಗದಲ್ಲಿ ಆದಿತ್ಯನಾಥ್ ಮತ್ತವರ ಸಂಘಟನೆ ಪ್ರಭಾವಶಾಲಿಯಾಗಿದ್ದು ಇವರ ಅಸಮಾಧಾನವನ್ನು ಶಮನಗೊಳಿಸಲು ಪಕ್ಷದ ನಾಯಕರು ಮುಂದಾಗದಿದ್ದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ನಿಶ್ಚಿತ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News