×
Ad

ಸುಷ್ಮಾಗೆ ಟ್ವೀಟ್ ಮಾಡಿದ ಕೂಡಲೇ ಸಮಸ್ಯೆ ಪರಿಹಾರವಲ್ಲ, ಸಮಸ್ಯೆ ಸೃಷ್ಟಿಯೂ ಆಗುತ್ತೆ !

Update: 2017-01-09 13:41 IST

ಹೊಸದಿಲ್ಲಿ,ಜ.9 :ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸಕ್ರಿಯವಾಗಿರುವ ಸಚಿವೆಯಲ್ಲದೆ ತಮ್ಮಲ್ಲಿ ಸಹಾಯ ಕೇಳಿ ಟ್ವೀಟ್ ಮಾಡಿದವರಿಗೆ ನಿಜವಾಗಿಯೂ ಸಮಸ್ಯೆಯಿದೆಯೆಂದು ತಿಳಿದು ಬಂದರೆ ಅವರಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡಿದವರಲ್ಲ.ಇದೇ ಕಾರಣದಿಂದ ಆವರು ಬಹಳಷ್ಟು ಜನಪ್ರಿಯರಾಗಿ ಬಿಟ್ಟಿದ್ದಾರೆ. ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೀಡಾಗಿ ಎಐಐಎಂಎಸ್ ನಲ್ಲಿದ್ದಾಗಲೂ ಅವರು ಸಮಯ ಹೊಂದಿಸಿಕೊಂಡು ತಮ್ಮ ಕೈಲಾದ ಸಹಾಯ ಹಲವರಿಗೆ ಮಾಡಿದ್ದರು. ಆದರೆ ಸುಷ್ಮಾರಲ್ಲಿ ಸಹಾಯ ಯಾಚಿಸಿ ಟ್ವೀಟ್ ಮಾಡಿದ ಕೂಡಲೇ ಎಲ್ಲಾ ಸಮಸ್ಯೆಗೂ ಪರಿಹಾರ ದೊರೆಯುವುದೆಂದು ಯಾರಾದರೂ ತಿಳಿದರೆ ಅದು ತಪ್ಪಾದೀತು. ಕೆಲವೊಮ್ಮೆ ಸಹಾಯ ಯಾಚಿಸಿ ಮಾಡಿದ ಟ್ವೀಟೊಂದು ಸಮಸ್ಯೆಯನ್ನೂ ಸೃಷ್ಟಿಸಬಹುದು. ಅದಕ್ಕಿದೆ ಇಲ್ಲೊಂದು ದೃಷ್ಟಾಂತ.

ಇತ್ತೀಚೆಗೆ ಆಕೆಗೆ ಟ್ವೀಟ್ ಮಾಡಿದ್ದ ಪುಣೆಯಲ್ಲಿ ಐಟಿ ಉದ್ಯೋಗಿಯಾಗಿರುವ ಸ್ಮಿತ್ ರಾಜ್ ಎಂಬ ವ್ಯಕ್ತಿ ತನ್ನ ಪತ್ನಿ ಭಾರತೀಯ ರೈಲ್ವೆ ಉದ್ಯೋಗಿಯಾಗಿದ್ದು ಆಕೆಗೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಪೋಸ್ಟಿಂಗ್ ನೀಡಲಾಗಿದ್ದು ಒಂದು ವರ್ಷಕ್ಕೂ ಹೆಚ್ಚು ಸಮಯದ ತಮ್ಮ ವನವಾಸವನ್ನು ಅಂತ್ಯಗೊಳಿಸಬೇಕೆಂದು ಮನವಿ ಮಾಡಿದ್ದ. ಈ ಮನವಿಯನ್ನು ಓದಿದ್ದೇ ತಡ ಕೆಂಡಾಮಂಡಲವಾದ ಸುಷ್ಮಾ ಆತನಿಗೆ ಎಚ್ಚರಿಕೆ ನೀಡಿ ಟ್ವೀಟೊಂದನ್ನು ಮಾಡಿಯೇ ಬಿಟ್ಟರು. ‘‘ನೀವು ಅಥವಾ ನಿಮ್ಮ ಪತ್ನಿ ನನ್ನ ಸಚಿವಾಲಯದವರಾಗಿದ್ದಲ್ಲಿ ಹಾಗೂ ನೀವು ಇಂತಹ ವರ್ಗಾವಣೆಗೆ ಮನವಿ ಮಾಡಿದ್ದೇ ಆದಲ್ಲಿ ಇಷ್ಟರೊಳಗಾಗಿ ಸಸ್ಪೆಂಡ್ ಆರ್ಡರ್ ನಿಮ್ಮ ಕೈಸೇರುತ್ತಿತ್ತು,’’ಎಂದು ಹೇಳಿದಾಗ ಆ ಟ್ವೀಟ್ ಮಾಡಿದ ವ್ಯಕ್ತಿಯ ಜಂಘಾಬಲವೇ ಉಡುಗಿ ಹೋಗಿರಬಹುದೆಂಬುದರಲ್ಲಿ ಸಂಶಯವೇ ಇಲ್ಲ.

ಆದರೆ ನಿಜವಾಗಿಯೂ ಸಮಸ್ಯೆಯಿರುವವರು ತಮಗೆ ಟ್ವೀಟ್ ಮಾಡಿದಲ್ಲಿ ಸುಷ್ಮಾ ಅವರಿಗೆ ಸಹಾಯ ಮಾಡದೆ ಇರಲಾರರು ಎಂಬುದನ್ನು ಸಾಬೀತು ಪಡಿಸುವ ಇನ್ನೊಂದು ಘಟನೆ ಇಂದು ನಡೆದಿದೆ.

ಘಾನಾದ ದಂಪತಿಯೊಂದು ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ತಮ್ಮ ಪುತ್ರಿಯ ಚಿಕಿತ್ಸೆಯನ್ನು ಗಮನದಲ್ಲಿರಿಸಿ ತಮ್ಮ ವೀಸಾ ಅವಧಿಯನ್ನು ಹೆಚ್ಚಿಸಬೇಕೆಂದು ಕೇಳಿದ್ದೇ ತಡ, ಸುಷ್ಮಾ ದಂಪತಿಗೆ ಥಟ್ಟೆಂದು ಸಹಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News