×
Ad

ರಿಸರ್ವ್ ಬ್ಯಾಂಕ್ ಗೆ ಆಗಿರುವ ಹಾನಿ ರಾಷ್ಟ್ರೀಯ ಸಮಸ್ಯೆ: ಮಾಜಿ ಗವರ್ನರ್ ರೆಡ್ಡಿ

Update: 2017-01-10 12:54 IST

ಮುಂಬೈ, ಜ.10: ದೇಶದ ಆರ್ಥಿಕತೆಯಲ್ಲಿ ರಿಸರ್ವ್ ಬ್ಯಾಂಕಿನ ಪಾತ್ರವು ಗಂಡಾಂತರದಲ್ಲಿದೆ. ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದ್ದು, ಅದನ್ನು ರಾಷ್ಟ್ರೀಯ ಸಮಸ್ಯೆಯೆಂದೇ ತಿಳಿದು ಬಗೆಹರಿಸಬೇಕಾಗಿದೆ’’ ಎಂದು ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನನರ್ ವೈ.ವಿ.ರೆಡ್ಡಿ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘‘ರಿಸರ್ವ್ ಬ್ಯಾಂಕಿನ ಸಾಂಸ್ಥಿಕ ಗುರುತಿಗೇ ಹಾನಿಯಾಗಿದೆಯೆಂಬುದು ನನ್ನ ಶಂಕೆಯಾಗಿದೆ’’ಎಂದು ಅಭಿಪ್ರಾಯಪಟ್ಟರು.

‘‘ಇತ್ತೀಚಿಗಿನ ಬೆಳವಣಿಗೆಗಳ ಬಗ್ಗೆ ಆರ್ಥಿಕ ತಜ್ಞರು, ಸಾಮಾನ್ಯ ಜನರು ಹಾಗೂ ಬಡವರ ಹೇಳಿಕೆಗಳು ಆತಂಕಕಾರಿ. ರಿಸರ್ವ್ ಬ್ಯಾಂಕ್ ಗೌರವಕ್ಕೇ ಎದುರಾದ ಅಪಾಯ ಅತಿ ದೊಡ್ಡ ಅಪಾಯ. ವಿಶ್ವಾಸಾರ್ಹತೆ ಕಳೆದುಕೊಳ್ಳುವುದು ಕೂಡ ಅತ್ಯಂತ ಅಪಾಯಕಾರಿ. ವಾಸ್ತವ ಸ್ಥಿತಿ ಇದಾಗಿದ್ದರೆ ಅದೊಂದು ಕೇವಲ ರಾಜಕೀಯ ವಿಷಯವಾಗಿರದೆ ರಾಷ್ಟ್ರೀಯ ಸಮಸ್ಯೆಯಾಗಿದೆ’’ ಎಂದರು.

‘‘ದೇಶದ ಕೇಂದ್ರ ಬ್ಯಾಂಕ್ ಒಂದು ಹೇಗಿರಬೇಕು ಹಾಗೂ ಅದು ಹೇಗೆ ಕಾರ್ಯನಿರ್ವಹಿಸಬೇಕೆಂಬ ಬಗ್ಗೆ ಪಕ್ಷಾತೀತವಾಗಿ ಚರ್ಚೆ ನಡೆಯುವುದು ಈಗಿನ ಅಗತ್ಯವಾಗಿದೆ’’ ಎಂದವರು ತಿಳಿಸಿದರು.

ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡಿದ ಅವರು, ಅಮಾನ್ಯೀಕರಣ ಮತ್ತು ಕಾಳಧನದ ನಡುವೆ ನೇರ ಸಂಬಂಧವಿಲ್ಲ. ಬದಲಾಗಿ ಪರೋಕ್ಷ ಸಂಬಂಧವಿದೆ ಹಾಗೂ ವಿಶ್ಲೇಷಣಾತ್ಮಕವಾಗಿ ಹೇಳಬೇಕಾದರೆ ಸಾಂದರ್ಭಿಕ ಎಂದು ತಿಳಿಸಿದರು.

ಅಮಾನ್ಯೀಕರಣದ ಪರಿಣಾಮಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಗವರ್ನರ್ ಆಗಿ ಈ ಬಗ್ಗೆ ಯೋಚಿಸದೆ ಈಗಿನ ಪರಿಸ್ಥಿತಿಗನುಗುಣವಾಗಿ ಯೋಚಿಸಿದರೆ, ಅದರಿಂದ ಜನರಿಗೆ ತೊಂದರೆಯುಂಟಾಗಿರುವುದು ನಿಜವಾದರೂ, ಅದರಿಂದ ಗರಿಷ್ಠ ಪ್ರಯೋಜನ ದೊರೆಯುವ ಬಗೆ ಹೇಗೆ ಎಂದು ಯೋಚಿಸಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News