25 ವರ್ಷದ ಉದ್ಯೋಗಿ, ವಿಶೇಷ ಕೋಚಿಂಗ್ ಇಲ್ಲ , CAT ನಲ್ಲಿ 99.45 !
ಹೊಸದಿಲ್ಲಿ, ಜ.10: ಈತನ ವಯಸ್ಸು 25. ವೃತ್ತಿಯಲ್ಲಿ ದಾಮೋದರ್ ವ್ಯಾಲಿ ಕಾರ್ಪೊರೇಶನ್ನಿನಲ್ಲಿ ಅಸಿಸ್ಟೆಂಟ್ ಇಂಜಿನಿಯರ್. ಪಶ್ಚಿಮ ಬಂಗಾಳದ ದುರ್ಗಾಪುರ ನಿವಾಸಿಯಾದ ಅರ್ಕಬೃತ ಚಕ್ರವರ್ತಿ ಎಂಬ ಈ ಯುವಕನ ಸಾಧನೆಯೇನು ಗೊತ್ತೇ ? ಯಾವುದೇ ಕೋಚಿಂಗ್ ಪಡೆಯದೆ CATನಲ್ಲಿ ತನ್ನ ಮೂರನೆ ಪ್ರಯತ್ನದಲ್ಲಿಯೇ ಈತ 99.45% ಅಂಕಗಳನ್ನುಪಡೆದು ಟಾಪರ್ ಆಗಿದ್ದಾರೆ. ಈ ಕೋಚಿಂಗ್ ಯುಗದಲ್ಲಿ ಈ ಸಾಧನೆ ಅದ್ಭುತವೇ ಸರಿ.
ತಮ್ಮ ಸಾಧನೆಯ ಬಗ್ಗೆ ಅರ್ಕಬೃತ ಹೀಗೆ ಹೇಳುತ್ತಾರೆ ಕೇಳಿ, ‘‘ನನ್ನ ಸ್ಕೋರ್ ಕಾರ್ಡ್ ಬಗ್ಗೆ ನನಗೆ ಸ್ವಲ್ಪ ನಿರಾಸೆಯಿದೆ. ಎಲ್.ಆರ್ ಹಾಗೂ ಡಿಐ ಸೆಕ್ಷನ್ನಿನಲ್ಲಿ ನನಗೆ 87.8 ಅಂಕಗಳು ದೊರೆತಿದ್ದು, ನನ್ನ ನಿರೀಕ್ಷೆಗಿಂತ ಇದು ಕಡಿಮೆ. ಪ್ರತೀದಿನ ಕಚೇರಿಯಿಂದ ಮನೆಗೆ ಬಂದ ನಂತರ ನನಗೆ ನಾನೇ ಕೊಡುತ್ತಿದ್ದ ಅಣಕು ಪರೀಕ್ಷೆಗಳು ನನ್ನ ಗುರಿ ಸಾಧಿಸಲು ನನಗೆ ಸಹಾಯ ಮಾಡಿದವು. ಈ ಪರೀಕ್ಷೆಗಳ ಮೂಲಕ ನಾನು ಯಾವ ಕ್ಷೇತ್ರಗಳಲ್ಲಿ ಇನ್ನೂ ಸುಧಾರಿಸಬೇಕೆಂದು ತಿಳಿದು ಆ ನಿಟ್ಟಿನಲ್ಲಿಯೇ ಪ್ರಯತ್ನ ಮುಂದುವರಿಸಿದೆ’’ ಎನ್ನುತ್ತಾರವರು.
ಇದೀಗ ಇಂಜಿನಿಯರ್ ಆಗಿರುವ ಅವರಿಗೆ ಮುಂದೆ ಮ್ಯಾನೇಜ್ ಮೆಂಟ್ ಕ್ಷೇತ್ರಕ್ಕೆ ಕಾಲಿಡುವುದು ಸ್ವಲ್ಪ ಶ್ರಮದಾಯಕವೇ ಸರಿ. ಆದರೆ ಅರ್ಕಬೃತ ಅವರು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಯೋಜನೆ ಹೊಂದಿದ್ದಾರೆ. ಅಮೆರಿಕದಲ್ಲಿ ಎನರ್ಜಿ ಕನ್ಸಲ್ಟೆಂಟ್ ಕೋರ್ಸ್ ನಡೆಸುವುದು ಅವರ ಉದ್ದೇಶ. ಈ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉಜ್ವಲ ಅವಕಾಶಗಳಿವೆಯೆಂಬುದು ಅವರ ನಿರೀಕ್ಷೆ.
ದಾಮೋದರ್ ವ್ಯಾಲಿ ಕಾರ್ಪೊರೇಶನ್ನಿನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಅವರಿಗೆ ಮೂರು ವರ್ಷ ಹಾಗೂ ಮೂರು ತಿಂಗಳ ಸೇವಾನುಭವವಿದೆ. ಕೊಲ್ಕತ್ತಾದ ಜಾದವಪುರ ವಿಶ್ವಿವಿದ್ಯಾನಿಲಯದಿಂದ ಅವರು ತಮ್ಮ ಬಿ.ಟೆಕ್ (ಇಲೆಕ್ಟ್ರಿಕಲ್) ಪದವಿ ಪಡೆದಿದ್ದಾರೆ.
ಅರ್ಕಬೃತ ಅವರ ತಂದೆ ಕಲ್ಯಾಣ್ ಚಕ್ರವರ್ತಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ವೈದ್ಯರಾಗಿದ್ದರೆ. ತಾಯಿ ಸೊನಾಲಿ ಚಕ್ರವರ್ತಿ ಗೃಹಿಣಿಯಾಗಿದ್ದಾರೆ.
ಮುಂದಿನ ವರ್ಷದ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅರ್ಕಬೃತ ಅವರ ಕೆಲವು ಸಲಹೆಗಳಿವೆ. ‘‘ಇನ್ನಷ್ಟೇ ತಯಾರಿ ಆರಂಭಿಸಬೇಕಿರುವವರು ಪ್ರತಿ ದಿನ ಎರಡು ಗಂಟೆ ಅಧ್ಯಯನ ನಡೆಸಬೇಕು. ಪ್ರತಿದಿನ ಅಣಕು ಪರೀಕ್ಷಾ ಪ್ರಶ್ನೆಪತ್ರಿಕೆಗಳ ಮೇಲೆ ಕಣ್ಣಾಡಿಸಬೇಕು. ಇದು ನನಗೆ ಬಹಳಷ್ಟು ಸಹಾಯ ಮಾಡಿತು. ಇತರರಿಗೂ ಸಹಾಯವಾಗುವುದು ಖಂಡಿತ’’ ಎಂದು ಅವರು ಹೇಳುತ್ತಾರೆ.