×
Ad

ಹಾಫ್‌ರೇಟ್ ದಂಧೆಗೆ ಇಳಿದ ಬಿಎಸ್‌ಎಫ್ ಅಧಿಕಾರಿಗಳು!

Update: 2017-01-11 08:57 IST

ಶ್ರೀನಗರ, ಜ.11: ಗಡಿಭದ್ರತಾ ಪಡೆಯ ಅಧಿಕಾರಿಗಳು ತಮಗೆ ಸರಕಾರದಿಂದ ದೊರಕುವ ಇಂಧನ ಹಾಗೂ ಪಡಿತರ ಆಹಾರ ಧಾನ್ಯಗಳನ್ನು ಅರ್ಧ ದರಕ್ಕೆ ಸ್ಥಳೀಯ ನಿವಾಸಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ.

ಶ್ರೀನಗರ ಗಡಿಯಲ್ಲಿ ಭದ್ರತಾ ಪಡೆಯ ಶಿಬಿರಗಳ ಪಕ್ಕದಲ್ಲಿ ವಾಸಿಸುವ ನಾಗರಿಕರಿಗೆ ಅಧಿಕಾರಿಗಳು ತಮ್ಮ ಪಾಲಿನ ರೇಷನ್ ಹಾಗೂ ಇಂಧನ ಮಾರಾಟ ಮಾಡುತ್ತಿರುವ ಮಾಹಿತಿಯನ್ನು ಬಿಎಸ್‌ಎಫ್‌ನ 29ನೆ ಬೆಟಾಲಿಯನ್ ಜವಾನ್ ತೇಜ್ ಬಹದ್ದೂರ್ ಯಾದವ್ ಬಹಿರಂಗಪಡಿಸಿದ ಬೆನ್ನಲ್ಲೇ ಇದನ್ನು ದೃಢಪಡಿಸಿ ಹಲವರು ಹೇಳಿಕೆ ನೀಡುತ್ತಿದ್ದಾರೆ.

ಬಿಎಸ್‌ಎಫ್ ಕೇಂದ್ರ ಕಚೇರಿ ಇರುವ ಹುಮ್‌ಹಮಾ ಪ್ರದೇಶದ ಅಂಗಡಿಗಳ ಮಂದಿ ಇದರ ಫಲಾನುಭವಿಗಳಾಗಿದ್ದು, ಪೆಟ್ರೋಲ್, ಡೀಸೆಲ್ ಹಾಗೂ ಪಡಿತರವನ್ನು ಕೂಡಾ ಅಧಿಕಾರಿಗಳು ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. "ಅವರು ಬೇಳೆಕಾಳು ಹಾಗೂ ತರಕಾರಿಗಳನ್ನು ಅಕ್ಕಪಕ್ಕದ ನಾಗರಿಕರಿಗೆ ಅರ್ಧ ದರದಲ್ಲಿ ಮಾರಾಟ ಮಾಡುತ್ತಾರೆ. ನಮಗೆ ಸಿಗಬೇಕಾದ ಸೌಲಭ್ಯಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮಧ್ಯವರ್ತಿಗಳಿಗೆ ಹಾಗೂ ಹೊರಗಿನವರಿಗೆ ಮಾರಾಟ ಮಾಡುತ್ತಿದ್ದಾರೆ" ಎಂದು ಹೆಸರು ಬಹಿರಂಗಡಿಸಲು ಇಚ್ಛಿಸದ ಯೋಧರೊಬ್ಬರು ಹೇಳಿದ್ದಾರೆ.

ಸಿವಿಲ್ ಗುತ್ತಿಗೆದಾರರೊಬ್ಬರೂ ಇದನ್ನು ದೃಢಪಡಿಸಿದ್ದು, ಎಲ್ಲ ದಿನಬಳಕೆ ಸಾಮಗ್ರಿಗಳು ಅರ್ಧದರಕ್ಕೆ ಸಿಗುತ್ತವೆ ಎಂದಿದ್ದಾರೆ.

ತಮ್ಮ ಅಧಿಕಾರಿಗಳಿಗೆ ಪೀಠೋಪಕರಣಗಳಿಗೆ ಬೇಡಿಕೆ ಸಲ್ಲಿಸುವ ವೇಳೆ ಖರೀದಿ ಅಧಿಕಾರಿಗಳು ಕಮಿಷನ್ ಪಡೆಯುತ್ತಿದ್ದಾರೆ ಎಂದು ಪೀಠೋಪಕರಣಗಳ ಡೀಲರ್ ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಉನ್ನತ ಅಧಿಕಾರಿಗಳಿಗೂ ಮಾಹಿತಿ ಇದೆ ಎನ್ನಲಾಗಿದ್ದು, ಕಳೆದ ತಿಂಗಳು ಶ್ರೀನಗರಕ್ಕೆ ಆಡಳಿತ ವಿಭಾಗದ ಐಜಿ ಆಗಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್‌ನ ರವಿದೀಪ್ ಸಿಂಗ್ ಸಾಹಿ, ಇಂಥ ದಂಧೆಗೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News