​ರಿಸರ್ವ್ ಬ್ಯಾಂಕ್ ಅಲ್ಲ; ಮೋದಿಯಿಂದಲೇ ಎಲ್ಲ ನಿರ್ಧಾರ: ಅಮರ್ತ್ಯ ಸೇನ್

Update: 2017-01-11 03:42 GMT

ಹೊಸದಿಲ್ಲಿ, ಜ.11: ಇತ್ತೀಚಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಯಾವ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವೂ ಇಲ್ಲ; ಎಲ್ಲ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿಯೇ ತೆಗೆದುಕೊಳ್ಳುತ್ತಿದ್ದಾರೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೆನ್ ಬಾಂಬ್ ಸಿಡಿಸಿದ್ದಾರೆ.

ಆರ್‌ಬಿಐನ ಇಬ್ಬರು ಮಾಜಿ ಗವರ್ನರ್‌ಗಳಾದ ವೈ.ವಿ.ರೆಡ್ಡಿ ಹಾಗೂ ಬಿಮಲ್ ಜಲನ್ ಬಳಿಕ ಇದೀಗ ಅಮರ್ತ್ಯಸೆನ್ ಆರ್‌ಬಿಐ ಸ್ವಾಯತ್ತತೆ ಬಗ್ಗೆ ಧ್ವನಿ ಎತ್ತಿದ್ದಾರೆ. ನೋಟು ರದ್ದತಿ ನಿರ್ಧಾರವನ್ನು ಕಟುವಾಗಿ ಟೀಕಿಸಿದ ಅವರು, "ಈ ನಿರ್ಧಾರ ಕಪ್ಪುಹಣವನ್ನು ತೊಡೆದುಹಾಕುವಲ್ಲಿ ವಿಫಲವಾಗಿದ್ದರೂ, ಸಂಶಯದ ಲಾಭ ಪಡೆದು ಮೋದಿ ಇದಕ್ಕೆ ಜನ ಬೆಂಬಲ ಪಡೆಯುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

"ಕಪ್ಪು ಹಣ ತೊಡೆದುಹಾಕಲು ಪ್ರಧಾನಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜನ ನಂಬಿದ್ದಾರೆ. ಈ ಸಂಶಯದ ಲಾಭ ಮೋದಿಗೆ ವರದಾನವಾಗಿದೆ. ಶ್ರೀಮಂತರಿಗೆ ಇದರಿಂದ ಬಹಳಷ್ಟು ತೊಂದರೆಯಾಗಿದೆ ಎಂಬ ಅಂಶ ಬಡಜನರ ಮನಸ್ಸು ಗೆಲ್ಲಲು ಕಾರಣವಾಗಿದೆ" ಎಂದು ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ಸೇನ್ ಹೇಳಿದ್ದಾರೆ.

ಡಿಸೆಂಬರ್ 30ರ ಬಳಿಕವೂ ಹಳೆಯ ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಮುಂದುವರಿಸಿದ ಆರ್‌ಬಿಐ ಕ್ರಮದ ಬಗ್ಗೆ ಪ್ರಶ್ನಿಸಿದಾಗ, "ಇದು ಆರ್‌ಬಿಐ ನಿರ್ಧಾರ ಎಂದು ನನಗೆ ಅನಿಸುತ್ತಿಲ್ಲ. ಅದು ಪ್ರಧಾನಿಯದ್ದೇ ನಿರ್ಧಾರ. ಯಾವುದರ ಬಗ್ಗೆಯೂ ಆರ್‌ಬಿಐ ಇತ್ತೀಚೆಗೆ ನಿರ್ಧಾರ ಕೈಗೊಳ್ಳುತ್ತಿದೆ ಎಂದು ನನಗೆ ಅನಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News