‘‘ದಿಲ್ಲಿ ಜೊತೆ ಪಂಜಾಬ್, ಗೋವಾ ಸಿಎಂ ಹುದ್ದೆಗಳನ್ನೂ ಕೇಜ್ರಿವಾಲ್ ಗೆ ನೀಡಲು ಸಂವಿಧಾನದಲ್ಲಿ ಸಂಶೋಧನೆ!’’
ಹೊಸದಿಲ್ಲಿ, ಜ.11: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ಮೂರು ಟ್ವೀಟುಗಳನ್ನು ಮಾಡಿ ಸಾಕಷ್ಟು ಸುದ್ದಿಯಾಗಿದ್ದಾರೆ.
‘‘ದಿಲ್ಲಿಯ ಕಸವನ್ನು ಗುಡಿಸಲು ವಿಫಲರಾದ ಕೇಜ್ರಿವಾಲ್ ಇದೀಗ ಪಂಜಾಬ್ ಹಾಗೂ ಗೋವಾದ ಕಸ ಗುಡಿಸಲು ಹೊರಟಿದ್ದಾರೆ’’ ಎಂದು ಅವರ ಮೊದಲ ಟ್ವೀಟ್ ಹೇಳಿದ್ದರೆ, ಎರಡನೆಯ ಟ್ವೀಟ್ ಹೀಗಿತ್ತು ‘‘ಕೇಜ್ರಿವಾಲ್ ಜೀಯವರ ಬಳಿ ಟೊಳ್ಳು ಮಾತುಗಳನ್ನು ಹೊರತುಪಡಿಸಿ ಬೇರೇನೂ ಇಲ್ಲ. ಅವರು ಕೂಡ ಫೇಕು ನಂಬರ್ 2 ಆಗಿದ್ದಾರೆ.’’ ದಿಗ್ವಿಜಯ್ ಅವರ ಮೂರನೇ ಟ್ವೀಟ್ ಇನ್ನಷ್ಟು ಕುತೂಹಲಕಾರಿ. ‘‘ಕೇಜ್ರಿವಾಲ್ ಅವರು ದಿಲ್ಲಿಯೊಂದಿಗೆ ಪಂಜಾಬ್ ಹಾಗೂ ಗೋವಾ ರಾಜ್ಯಗಳ ಮುಖ್ಯಮಂತ್ರಿಯಾಗುವುದಕ್ಕೆ ಭಾರತೀಯ ಸಂವಿಧಾನದಲ್ಲಿ ಸಂಶೋಧನೆ ನಡೆಸುವ ಅಗತ್ಯವಿದೆ’’ ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಂಜಾಬ್ ರಾಜ್ಯದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಾ, ಜನರು ಕೇಜ್ರಿವಾಲ್ ಅವರೇ ಸಿಎಂ ಅಭ್ಯರ್ಥಿ ಎಂದು ಎಣಿಸಿ ಮತ ಚಲಾಯಿಸಬೇಕೆಂದು ಕರೆ ನೀಡಿದ್ದರು.
ಪಂಜಾಬ್ ರಾಜ್ಯದಲ್ಲಿ ಫೆಬ್ರವರಿಯಲ್ಲಿ ಮತದಾನ ನಡೆಯಲಿದ್ದು, ಬಿಜೆಪಿ-ಅಕಾಲಿ ದಳ ಮೈತ್ರಿ ಹಾಗೂ ಕಾಂಗ್ರೆಸ್ ನಂತರದ ಸ್ಥಾನ ಎಎಪಿಗೆ ಹೋಗುವುದೆಂದು ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ.
ದಿಲ್ಲಿಯಲ್ಲಿ ಇನ್ನೊಂದು ಗಮನಿಸತಕ್ಕ ಬೆಳವಣಿಗೆಯಲ್ಲಿ ಇತ್ತೀಚೆಗೆ ಇಲ್ಲಿ ಕಾಣಿಸುತ್ತಿರುವ ಹೆಚ್ಚಿನ ದೊಡ್ಡ ಪೋಸ್ಟರುಗಳಲ್ಲಿ ಕೇಜ್ರಿವಾಲ್ ಅವರಿಗಿಂತ ಸಿಸೋಡಿಯಾ ಅವರ ಭಾವಚಿತ್ರಗಳೇ ಪ್ರಮುಖವಾಗಿ ಕಾಣಿಸುತ್ತಿವೆ.