×
Ad

ಮುಂದಿದೆ ನೋಟು ರದ್ದತಿಯ ಅತ್ಯಂತ ಕೆಟ್ಟ ಪರಿಣಾಮ : ಮನಮೋಹನ್ ಎಚ್ಚರಿಕೆ

Update: 2017-01-11 14:40 IST

ಹೊಸದಿಲ್ಲಿ,11 : ಸರಕಾರದ ನೋಟು ಅಮಾನ್ಯೀಕರಣದಿಂದಾಗಿ ದೇಶದಾದ್ಯಂತ ಜನರು ಈಗಾಗಲೇ  ಬಾಧಿತರಾಗಿದ್ದರೂ ಮುಂದಿನ ದಿನಗಳಲ್ಲಿ ಈ ಕ್ರಮದ ಅತ್ಯಂತ ಕೆಟ್ಟ ಪರಿಣಾಮ ಗೊತ್ತಾಗಲಿದೆ, ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಅಮಾನ್ಯೀಕರಣದ ವಿನಾಶಕಾರಿ ಪರಿಣಾಮಗಳ ಬಗ್ಗೆ ಜನಜಾಗೃತಿ ಉಂಟು ಮಾಡುವ ಕಾಂಗ್ರೆಸ್ ಪಕ್ಷದ ಜನ ವೇದನಾ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

‘‘ಅಮಾನ್ಯೀಕರಣ ದೇಶಕ್ಕೆ ನೋವುಂಟು ಮಾಡಿದೆ.ಪರಿಸ್ಥಿತಿ ಕೆಟ್ಟದಾಗಿದೆ. ಆದರೆ ಇದಕ್ಕಿಂತಲೂ ಕೆಟ್ಟದ್ದು ಇನ್ನಷ್ಟೇ ಬರಲಿದೆ,’’ ಎಂದವರು ಹೇಳಿದ್ದಾರೆ.

‘‘ದೇಶದ ಆರ್ಥಿಕತೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ತಾನು ಕಂಕಣ ಬದ್ಧನಾಗಿದ್ದೇನೆಂದು ಮೋದೀಜಿ ಹೇಳುತ್ತಿದ್ದಾರೆ. ಅಂತ್ಯದ ಆರಂಭವಾಗಿದೆ ಎಂದು ಈಗ ನಮಗೆ ತಿಳಿದು ಬರುತ್ತಿದೆ. ಅವರ ಹೇಳಿಕೆಗಳು ಬರೀ ಟೊಳ್ಳು,’’ ಎಂದರು ಮನಮೋಹನ್ ಸಿಂಗ್.

ರಾಜಧಾನಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘‘ಅಮಾನ್ಯೀಕರಣ ಕೇವಲ ಒಂದು ನೆಪವಷ್ಟೇ. ತಮಗೆ ಯೋಗ ಹಾಗೂ ಮೇಕ್ ಇನ್ ಇಂಡಿಯಾದ ಮುಖವಾಡದಲ್ಲಿ ಅಡಗಿಕೊಂಡಿರಲು ಸಾಧ್ಯವಿಲ್ಲ ಎಂದು ಮೋದಿಗೆ ತಿಳಿದಿದೆ. ಈ ಬಗ್ಗೆ ಅವರು ತಲೆಕೆಡಿಸಿಕೊಂಡಾಗ ಅವರು ದೇಶದ ಬೆನ್ನೆಲುಬನ್ನೇ (ಅಮಾನ್ಯೀಕರಣದ ಮೂಲಕ) ಮುರಿದು ಬಿಟ್ಟರು,’’ ಎಂದು ರಾಹುಲ್ ಹೇಳಿದರು.

ಈ ಸಂದರ್ಭ ಸರಕಾರದ ಸ್ವಚ್ಛ ಭಾರತ್ ಅಭಿಯಾನವನ್ನೂ ಟೀಕಿಸಿದ ರಾಹುಲ್ ‘‘ಎರಡೂವರೆ ವರ್ಷಗಳ ಹಿಂದೆ ಹಿಂದುಸ್ಥಾನವನ್ನು ಸ್ವಚ್ಛಗೊಳಿಸುತ್ತೇನೆಂದು ಹೇಳಿ ಅವರು ಎಲ್ಲರ ಕೈಗಳಿಗೆ ಪೊರಕೆಗಳನ್ನು ನೀಡಿದರು. ಅದು ಫ್ಯಾಶನ್ ಆಗಿತ್ತು. ಇದು ಸ್ವಲ್ಪ ದಿನ ಮುಂದುವರಿಯಿತು ಹಾಗೂ ನಂತರ ಅವರು ಅದನ್ನು ಮರೆತುಬಿಟ್ಟರು,’’ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭ ಮಾತನಾಡಿದ ಮಾಜಿ ವಿತ್ತ ಸಚಿವ ಮನಮೋಹನ್ ಸಿಂಗ್ ಅಮಾನ್ಯೀಕರಣದಿಂದಾಗಿ ದೇಶದ ಜಿಡಿಪಿ ಬಾಧಿತವಾಗುವುದು ಎಂದು ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News