×
Ad

ಪಂಜಾಬ್ ಚುನಾವಣೆಗೆ ಮೊದಲು ಹರ್ಭಜನ್ ನೀಡಿದರು ಅತ್ಯಂತ ಸಕಾಲಿಕ ಸಂದೇಶ

Update: 2017-01-12 14:43 IST

ಅಮೃತಸರ್, ಜ.12: ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿಯಿರುವಾಗಲೇ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ರಾಜ್ಯದ ಜನತೆಗೆ ಅತ್ಯಂತ ಸಕಾಲಿಕ ಸಂದೇಶ ನೀಡಿದ್ದಾರೆ.

‘‘ನನ್ನ ಬಾಲ್ಯದ ದಿನಗಳಲ್ಲಿ ಪಂಜಾಬ್ ಒಂದು ಸುಂದರ ಸ್ಥಳವಾಗಿತ್ತು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಹಾಗೂ ಎಲ್ಲರನ್ನೂ ಸ್ನೇಹಾದರಗಳಿಂದ ಸ್ವಾಗತಿಸಿ ಸತ್ಕರಿಸುತ್ತಿದ್ದ ಜನತೆಯಿದ್ದರು. ಸಣ್ಣವರಿರುವಾಗ ನಾವು ಯಾವುದೇ ಕೆರೆಗೆ ಹೋಗಿ ಈಜಾಡುತ್ತಿದ್ದೆವು, ಕಬ್ಬಿನ ಗದ್ದೆಗಳಿಗೆ ನುಗ್ಗಿ ಕಬ್ಬುಗಳನ್ನು ಸವಿಯುತ್ತಿದ್ದೆವು. ಯಾರೂ ನಮ್ಮನ್ನು ಪ್ರಶ್ನಿಸುತ್ತಿರಲಿಲ್ಲ. ಜಲಂಧರ್ ನ ನನ್ನ ಮನೆಯ ಸುತ್ತಮುತ್ತಲಿನ ಪ್ರತಿಯೊಂದು ಮನೆಯ ಕಿಟಿಕಿ ಗಾಜುಗಳನ್ನು ನಾನು ಮುರಿದಿದ್ದರೂ ಯಾರೂ ನನ್ನನ್ನು ಬಹಿಷ್ಕರಿಸಿರಲಿಲ್ಲ.’’

ಆದರೆ ಈಗ ಎಲ್ಲವೂ ಬದಲಾಗಿ ಬಿಟ್ಟಿದೆ. ಈಗ ಪ್ರತಿಭಾವಂತ ಯುವಜನತೆ ಡ್ರಗ್ಸ್ ಗಳಿಗೆ ಬಲಿಯಾಗುತ್ತಿದ್ದಾರೆಂದು ತಿಳಿದು ನನಗೆ ಕಳವಳವುಂಟಾಗಿದೆ. ಡ್ರಗ್ಸ್ ಅವರನ್ನು ಎಲ್ಲಿಯೂ ಒಯ್ಯುವುದಿಲ್ಲ, ಕ್ರೀಡೆ ಮತ್ತು ಶಿಕ್ಷಣದಿಂದ ಮಾತ್ರ ಅವರು ಜೀವನದಲ್ಲಿ ಉನ್ನತಿ ಸಾಧಿಸಬಹುದು. ಡ್ರಗ್ಸ್ ಪಂಜಾಬನ್ನು ಕೊಲ್ಲದಂತೆ ದಯವಿಟ್ಟು ನೋಡಿಕೊಳ್ಳಿ,’’ ಎಂದು ಹರ್ಭಜನ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

‘‘ರಾಜ್ಯದಲ್ಲಿ ಹೆಚ್ಚುತ್ರಿರುವ ಕ್ಯಾನ್ಸರ್ ಪ್ರಕರಣಗಳನ್ನು ಹಾಗೂ ಭಟಿಂಡಾದಿಂದ ರಾಜಸ್ಥಾನಕ್ಕೆ ಕ್ಯಾನ್ಸರ್ ರೋಗಿಗಳನ್ನು ಕರೆದುಕೊಂಡು ಹೋಗುವ ಕ್ಯಾನ್ಸರ್ ಎಕ್ಸ್ ಪ್ರೆಸ್ ಎಂದು ಕರೆಯಲ್ಪಡುವ ರೈಲಿನ ಬಗ್ಗೆ ಕೇಳಿದ್ದೇನೆ. ನಾವೇ ಈ ಸಮಸ್ಯೆಯನ್ನು ನಮಗೆ ತಂದೊಡ್ಡಿದ್ದೇವೆ. ನಮ್ಮ ಬೆಳೆಗಳು ಹಾಗೂ ತರಕಾರಿಗಳಿಗೆ ಹಾನಿಕಾರಕ ರಾಸಾಯನಿಕಗಳನ್ನು ಸಿಂಪಡಿಸಿ ನಾವು ನಮ್ಮ ಆರೋಗ್ಯವನ್ನು ಕೆಡಿಸುತ್ತಿದ್ದೇವೆ. ರಾಸಾಯನಿಕಗಳನ್ನು ಬಳಸಿ ವರ್ಷಕ್ಕೆ ನಾಲ್ಕು ಬೆಳೆಗಳನ್ನು ಬೆಳೆಯಬಹುದು. ಅದರಿಂದ ಭೂಮಿಯ ಹಾಗೂ ಜನರ ಗತಿಯೇನೆಂದು ರೈತರು ಯೋಚಿಸಬೇಕು.ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಪಂಜಾಬನ್ನು ಮರುಭೂಮಿಯನ್ನಾಗಿಸಬೇಡಿ,’’ ಎಂದು ಅವರು ಮನವಿ ಮಾಡಿದ್ದಾರೆ.

ಹೆಚ್ಚುತ್ತಿರುವ ನಗರೀಕರಣದಿಂದ ಕೃಷಿ ಭೂಮಿಗಳು ಇಲ್ಲವಾಗಿ ಕಟ್ಟಡಗಳು ತಲೆಯೆತ್ತುತ್ತಿರುವುದನ್ನು ಪ್ರಸ್ತಾಪಿಸಿದ ಅವರು ಇದರಿಂದ ಪ್ರಕೃತಿ ನಾಶದ ಜತೆ ಕೃಷಿ ನಾಶವೂ ಆಗುತ್ತಿದೆ ಎಂದು ಎಚ್ಚರಿಸಿದರಲ್ಲದೆ ಮತ್ತೆ ಹಿಂದಿನ ವಾತಾವರಣದ ಪುನರ್ ಸೃಷ್ಟಿ ಮಾಡಬೇಕೆನಿಸುತ್ತಿದೆ ಎಂದು ಹೇಳಿದ ಹರ್ಭಜನ್ ತಾನು ‘ಖುಲ್ಲಾ-ದುಲ್ಲಾ, ಹರಾ ಪಂಜಾಬ್’ ಬಯಸುತ್ತಿದ್ದೇನೆ ಎಂದಿದ್ದಾರೆ. ಪರಿಸರ ಸ್ನೇಹಿ ಕೃಷಿ ಚಟುವಟಿಕೆಗಳನ್ನು ರೈತರು ನಡೆಸಬೇಕೆಂದು ಕರೆ ನೀಡಿದ ಅವರು ಪಂಜಾಬ್ ರಾಜ್ಯವನ್ನು ಒಂದು ಉತ್ತಮ ಮತ್ತು ಸಂತಸ ಭರಿತ ನಾಡನ್ನಾಗಿಸಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News