ಪತ್ರಕರ್ತರನ್ನು ಕಂಡಕೂಡಲೇ ಕಾಲಿಗೆ ಬುದ್ದಿ ಹೇಳಿದ ರಿಸರ್ವ್ ಬ್ಯಾಂಕ್ ಗವರ್ನರ್ ಪಟೇಲ್

Update: 2017-01-12 11:29 GMT

ಅಹ್ಮದಾಬಾದ್, ಜ. 12 : ಇಲ್ಲಿ ವೈಬ್ರೆನ್ಟ್ ಗುಜರಾತ್ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರು ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು  ಹೆಣಗಾಡಿದ್ದಾರೆ. ಪತ್ರಕರ್ತರನ್ನು ಕಂಡಕೂಡಲೇ ಪಟೇಲ್ ಹೆಚ್ಚು ಕಡಿಮೆ ಓಡಲು ಪ್ರಾರಂಭಿಸಿದರು. 

ಪತ್ರಕರ್ತರು ತಮ್ಮ ಬಳಿ ತಲುಪುವ ಮೊದಲೇ ಅವರು ಕಾರು ಏರಿ ಅಲ್ಲಿಂದ ಹೊರಟೇ ಬಿಟ್ಟರು. 

ಪ್ರತಿವರ್ಷ ನಡೆಯುವ ಬಂಡವಾಳ ಹೂಡಿಕೆ ಆಕರ್ಷಿಸುವ ವೈಬ್ರೆನ್ಟ್ ಗುಜರಾತ್ ಸಮಾವೇಶ ಈಗ ಗುಜರಾತ್ ನಲ್ಲಿ ನಡೆಯುತ್ತಿದ್ದು ಅದರಲ್ಲಿ ಒಂದು ಅಧಿವೇಶನವನ್ನು ಉದ್ದೇಶಿಸಿ ಊರ್ಜಿತ್ ಪಟೇಲ್ ಮಾತನಾಡಿದರು. 

ಸಮಾವೆಶ ನಡೆಯುತ್ತಿದ್ದ ಸಭಾಂಗಣದ ಮೊದಲ ಮಹಡಿಯ ಪ್ರವೇಶ ದ್ವಾರದ ಬಳಿ ಪತ್ರಕರ್ತರು ತಮಗಾಗಿ ಕಾಯುತ್ತಿದ್ದಾರೆ ಎಂದು ತಿಳಿದ ಕೂಡಲೇ ಪಟೇಲ್ ಸಭಾಂಗಣದ ಹಿಂದಿನ ದ್ವಾರದಿಂದ ನಿರ್ಗಮಿಸಿದರು. ತಮ್ಮ ಹಿಂದೆ ಪತ್ರಕರ್ತರು ಬರುತ್ತಿದ್ದರೆ ಎಂದು ಭಾವಿಸಿದ ಪಟೇಲ್ ವೇಗವಾಗಿ ಓಡತೊಡಗಿದರು. 

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ ಅವರು ಒಮ್ಮೆಗೆ ಎರಡೆರಡು ಮೆಟ್ಟಿಲುಗಳನ್ನು ಇಳಿದು ವೇಗವಾಗಿ ಕಾರು ತಲುಪಿ ಅಲ್ಲಿಂದ ಹೊರಟು ಬಿಟ್ಟರು. ಅವರು ನೋಟು ರದ್ದತಿಯ ಕುರಿತು ತಮ್ಮ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಲು ಹೀಗೆ ಮಾಡಿದ್ದಾರೆ ಎಂದು ಅಲ್ಲಿದ್ದ ಪತ್ರಕರ್ತರು ಹೇಳಿದ್ದಾರೆ. 

ನೋಟು ರದ್ದತಿ ಹಾಗು ಆ ಬಳಿಕ ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಯಾದಾಗಲೆಲ್ಲಾ ಈ ವಿಷಯದಲ್ಲಿ ರಿಸರ್ವ್ ಬ್ಯಾಂಕ್ ನ ನಡೆಯ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದಿದೆ. ಸ್ವಾಯತ್ತ ಸಂಸ್ಥೆಯಾಗಿ ರಿಸರ್ವ್ ಬ್ಯಾಂಕ್ ಸರಿಯಾಗಿ ಕ್ರಮ ಕೈಗೊಳ್ಳಲಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಸರಿಯಾಗಿ ಮಾರ್ಗದರ್ಶನ ನೀಡಲಿಲ್ಲ. ಹಾಗು ಜನರಿಗೆ ನೋಟಿನ ಸಮಸ್ಯೆ ಆಗದಂತೆ ಸೂಕ್ತ ಪೂರ್ವ ತಯಾರಿ ಮಾಡಿಕೊಳ್ಳದೆ ಸಂಕಷ್ಟಕ್ಕೆ ತಳ್ಳಿದೆ ಎಂಬ ದೂರುಗಳು ಕೇಳಿ ಬಂದಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News