×
Ad

ವಾಯುಮಾಲಿನ್ಯ: ಭಾರತದಲ್ಲಿ ದಿಲ್ಲಿ ನಂ.1

Update: 2017-01-13 00:05 IST

ಹೊಸದಿಲ್ಲಿ, ಜ.12: ಬೆಂಗಳೂರು ಮತ್ತು ತುಮಕೂರು ರಾಜ್ಯದ ಅತ್ಯಂತ ಕಲುಷಿತ ನಗರಗಳಾಗಿವೆ ಎಂದು ಇತ್ತೀಚೆಗೆ ನಡೆಸಲಾದ ಅಧ್ಯಯನದಿಂದ ತಿಳಿದುಬಂದಿದೆ. ರಾಜ್ಯದ 20 ನಗರಗಳ ವಾಯುಮಾಲಿನ್ಯ ದತ್ತಾಂಶಗಳನ್ನು ಹೋಲಿಕೆ ಮಾಡಿದ್ದು ಬೆಂಗಳೂರು, ತುಮಕೂರು ಮತ್ತು ದಾವಣಗೆರೆ ಅತ್ಯಂತ ಕಲುಷಿತ ನಗರಗಳೆಂದು ಘೋಷಿಸಲ್ಪಟ್ಟಿವೆ. ರಾಯಚೂರು, ಕಲಬುರ್ಗಿ, ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ವಾಯುಮಾಲಿನ್ಯ ಮಟ್ಟ ಕೂಡಾ ರಾಷ್ಟ್ರೀಯ ಸರಾಸರಿಗಿಂತ ಮಿಗಿಲಾಗಿದೆ. ಗ್ರೀನ್‌ಪೀಸ್ ಎಂಬ ಎನ್‌ಜಿಒ ಸಂಸ್ಥೆ 24 ರಾಜ್ಯಗಳ 168 ನಗರಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿತ್ತು. ಉತ್ತರ ಭಾಗದ ನಗರಗಳಿಗೆ ಹೋಲಿಸಿದಲ್ಲಿ ದಕ್ಷಿಣ ಭಾಗದ ನಗರಗಳಲ್ಲಿ ಸ್ವಚ್ಛವಾದ ಗಾಳಿಯ ಪ್ರಮಾಣ ಹೆಚ್ಚಿದೆ ಎಂದು ವರದಿ ತಿಳಿಸಿದೆ. ಪಿಎಂ-10 (10 ಮೈಕ್ರಾನ್ ಡಯಾಮೀಟರ್ ಪ್ರಮಾಣದ ಧೂಳಿನ ಕಣ) ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಬೆಂಗಳೂರು ಮತ್ತು ತುಮಕೂರಿನಲ್ಲಿ ವಾರ್ಷಿಕ ಪಿಎಂ-10 ಪ್ರಮಾಣ ಪ್ರತೀ ಕ್ಯೂಬಿಕ್ ಮೀಟರ್‌ಗೆ ಸುಮಾರು 120 ಮೈಕ್ರೋಗ್ರಾಂ ಮತ್ತು ದಾವಣಗೆರೆಯಲ್ಲಿ 100 ಮೈಕ್ರೋಗ್ರಾಂ ಆಗಿದೆ. ರಾಯಚೂರಿನಲ್ಲಿ ಈ ಪ್ರಮಾಣ 90 ಆಗಿದೆ (ರಾಷ್ಟ್ರೀಯ ಸರಾಸರಿ 60).

ಡೀಸೆಲ್ ಜನರೇಟರ್ ಸೆಟ್‌ಗಳು ಬೆಂಗಳೂರಿನ ವಾಯುಮಾಲಿನ್ಯಕ್ಕೆ ಪ್ರಧಾನ ಕಾರಣ ಎಂದು ಪೂರಕವಾಗಿ ನಡೆಸಲಾದ ಇನ್ನೊಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೇತೃತ್ವದಲ್ಲಿ ಇಂಧನ ಮತ್ತು ಸಂಪನ್ಮೂಲ ಸಂಸ್ಥೆ ಈ ಸಮೀಕ್ಷೆ ನಡೆಸಿತ್ತು. ವಾಯುಮಾಲಿನ್ಯ ಹೆಚ್ಚಳಕ್ಕೆ ಸಾಗಣೆ ವ್ಯವಸ್ಥೆ ಕೂಡಾ ಕಾರಣವಾಗಿದೆ. ವಾಹನಗಳ ಸಂಖ್ಯೆ ಹೆಚ್ಚಿರುವ ಕಾರಣ ವಾಹನಗಳಿಂದ ಹೊರಸೂಸುವ ಹೊಗೆಯ ಪ್ರಮಾಣ ಕೂಡಾ ಹೆಚ್ಚಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣವಾಗುತ್ತಿದೆ. ಬೆಂಗಳೂರು ನಗರದಲ್ಲಿ ಹೊಗೆ ಉಗುಳುವ ಬೃಹತ್ ಕೈಗಾರಿಕೆಗಳು ಕಡಿಮೆ ಇರುವ ಕಾರಣ ವಾಯುಮಾಲಿನ್ಯ ಹೆಚ್ಚಳದಲ್ಲಿ ಕೈಗಾರಿಕೆಗಳ ಪಾಲು ಹೆಚ್ಚೇನಿಲ್ಲ. ಆದರೆ ಪೀಣ್ಯ ಕೈಗಾರಿಕಾ ವಲಯದಲ್ಲಿ ಕೈಗಾರಿಕೆಗಳು ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ 2015ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಅತ್ಯಂತ ಕಲುಷಿತ 20 ನಗರಗಳಲ್ಲಿ ಪಿಎಂ-10 ಮಟ್ಟವು 268ರಿಂದ 168 ಮೈಕ್ರೋಗ್ರಾಂ ನಡುವೆ ಇತ್ತು.

ಇದರಲ್ಲಿ ದಿಲ್ಲಿ 268 ಮೈಕ್ರೋಗ್ರಾಂ ಮಟ್ಟದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶದ ಗಾಝಿಯಾಬಾದ್, ಅಲಹಾಬಾದ್ ಮತ್ತು ಬರೇಲಿ ಆ ನಂತರದ ಸ್ಥಾನದಲ್ಲಿತ್ತು. ಉಸಿರಾಟಕ್ಕೆ ಸಮಸ್ಯೆಯಾಗುವ ಗಾಳಿಯಿಂದ ಈಗ ನಾವು ಆತಂಕಿತರಾಗಿದ್ದೇವೆ. ವಾಯುಮಾಲಿನ್ಯದ ಕಾರಣ ಸಾವಿಗೀಡಾಗುವವರ ಪ್ರಮಾಣ ತಂಬಾಕು ಸೇವನೆಯಿಂದ ಮೃತಪಡುವವರ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಆಗಿದೆ ಎಂಬುದನ್ನು ಗಮನಿಸಬೇಕು ಎಂದು ಗ್ರೀನ್‌ಪೀಸ್ ಸಂಸ್ಥೆಯ ಅಧಿಕಾರಿ ಸುನೀಲ್ ದಹಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News