16 ವರ್ಷದ ಅಪ್ರಾಪ್ತೆಗೆ, ಪತ್ನಿಯ ಕರ್ತವ್ಯ ನಿರ್ವಹಿಸಿಲ್ಲ ಎಂದು ನೋಟಿಸು ಕಳುಹಿಸಿದ ಭೂಪ!
ರಂಗಾರೆಡ್ಡಿ,ಜ.13: ತೆಲಂಗಾಣದ ರಂಗಾರೆಡ್ಡಿಜಿಲ್ಲೆಯ ಅಬುಲಾಪುರ ಮಂಡಲದಲ್ಲಿ ಹದಿನಾರುವರ್ಷದ ಬಾಲಕಿಗೆ ಪತ್ನಿಯ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ನೋಟಿಸು ಕಳುಹಿಸಿದ ಪ್ರಕರಣ ನಡೆದಿದೆ.
ಬಾಲಕಿಯ ಪತಿ ಸಹೋದರ ಸಂಬಂಧಿಯಾಗಿದ್ದು, ಕಳೆದ ವರ್ಷ ಅವರಿಬ್ಬರ ಮದುವೆಯಾಗಿತ್ತು. ಪತಿಶ್ರೀಕಾಂತ್ ಗೌಡನ ವಯಸ್ಸಿಗಿಂತ ಅರ್ಧದಷ್ಟು ಪತ್ನಿಯ ವಯಸ್ಸು ಕಡಿಮೆ ಇದೆ. ತನ್ನ ಪತಿ ಶಾರೀರಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆದ್ದರಿಂದ ಮದುವೆಯಾದ ಎರಡು ತಿಂಗಳ ನಂತರ ತಾನು ಪತಿಗೃಹದಿಂದ ತನ್ನ ಮನೆ ಬಂದಿದ್ದೇನೆಂದು ಬಾಲಕಿ ಹೇಳುತ್ತಿದ್ದಾಳೆ.
ಬಾಲಕಿಯ ಮನೆಯವರು ಒಂದು ಲಕ್ಷ ರೂಪಾಯಿ ಹಾಗೂ 15 ತೊಲೆ ಬಂಗಾರವನ್ನು ವರದಕ್ಷಿಣೆ ಕೊಟ್ಟಿದ್ದರು. ಅದನ್ನು ವಾಪಸು ಪಡೆಯಲು ಪಂಚಾಯಿತಿ ನಡೆಯುತ್ತಿದೆ.
ಈ ನಡುವೆಬಾಲಕಿ ಪತಿ ವತಿಯಿಂದ ಬಂದ ಇಬ್ಬರು ವಕೀಲರು ನೋಟಿಸು ನೀಡಿದ್ದಾರೆ. ವರದಕ್ಷಿಣೆ ಮೊತ್ತ ಹಾಗೂ ಚಿನ್ನ ಮರಳಿ ಪಡೆಯಲಿಕ್ಕಾಗಿ ಬಾಲಕಿ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಬಲಾಲಾ ಹಕ್ಕುಲ್ ಸಂಗಮ್ ಎಂಬ ಸಂಸ್ಥೆಯ ಸಹಾಯವನ್ನು ಕೇಳಿದ್ದಾಳೆ.
ಆಕೆಗೆ ನೀಡಲಾದ ವಕೀಲ ನೋಟಿಸಿನಲ್ಲಿ ’ನೀವು ನಮ್ಮ ಕಕ್ಷಿದಾರರನ್ನು ಪತಿಯ ರೀತಿಯಲ್ಲಿ ನೋಡದೆ ನಿರ್ಲಕ್ಷಿಸಿದ್ದೀರಿ, ಅವರನ್ನು ಇಷ್ಟಪಡುತ್ತಿಲ್ಲ ಮತ್ತು ನಿಮ್ಮ ಪತಿಯ ತಾಯಿ, ಸಹೋದರ ಮತ್ತು ಅವರ ಪತ್ನಿಯೊಂದಿಗೆ ಇದೇ ರೀತಿ ವರ್ತಿಸುತ್ತಿದ್ದೀರಿ" ಎಂದು ದೂರಲಾಗಿದೆ.
ಜತೆಗೆ ಪತ್ನಿಯ ಕರ್ತವ್ಯವವನ್ನು ನೀವು ನಿರ್ವಹಿಸಿಲ್ಲ ಎಂದು ಬಾಲಕಿಗೆ ಹೇಳಲಾಗಿದೆ. ಯಾರಲ್ಲಿಯೂ ಹೇಳದೆ ಅತ್ತೆ ಮನೆಯಿಂದ ಮರಳಿದ್ದೀರಿ. ಆದ್ದರಿಂದ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಹದಿನೈದು ದಿವಸದೊಳಗೆ ಅತ್ತೆಮನೆಗೆ ಮರಳಬೇಕು ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿರಬೇಕು ಎಂದು ಬರೆಯಲಾಗಿದೆ.
ಮಕ್ಕಳ ಹಕ್ಕುಗಳ ಸಂಸ್ಥೆಯ ಅಚ್ಯುತರಾವ್ ಇದಕ್ಕೆ ಪ್ರತಿಕ್ರಿಯಿಸಿ" ಅಪ್ರಾಪ್ತ ಬಾಲಕಿಯನ್ನು ಮದುವೆಯಾದದ್ದೆ ಅಪರಾಧ, ಇನ್ನು ನೋಟಿಸು ಕಳುಹಿಸಿದ್ದು ಕಾನೂನಿನ ಘೋರ ಉಲ್ಲಂಘನೆಯಾಗಿದೆ" ಎಂದು ಹೇಳಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ. ಪತಿಮನೆ ಬಿಟ್ಟು ಬಂದ ಹುಡುಗಿ ಈಗ ತನ್ನ ಕಲಿಕೆಯನ್ನು ಮುಂದುವರಿಸುತ್ತಿದ್ದಾಳೆಂದು ಬಿಬಿಸಿ ವರದಿಮಾಡಿದೆ.