ಗಾಂಜಾ ಸೇವಿಸುತ್ತಿಯಾ ಎಂದು ಕೇಳಿ ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸರು!
ತಿರುವನಂತಪುರಂ,ಜ.13: ಕೇರಳದಲ್ಲಿ ಮತ್ತೊಂದು ಕಸ್ಟಡಿದೌರ್ಜನ್ಯದ ಘಟನೆ ವರದಿಯಾಗಿದೆ. ಹುಡುಗಿಯೊಬ್ಬಳಿಗೆ ಕೀಟಲೆ ನೀಡುತ್ತಿದ್ದಾನೆಂದು ಆರೋಪಿಸಿ ಪೊಲೀಸರುವಶಕ್ಕೆ ಪಡೆದಿದ್ದ ದಲಿತ ಯುವಕನನ್ನು ಪೊಲೀಸರು ಯದ್ವಾತದ್ವಾ ಹೊಡೆದು ಸೊಂಟು ಮುರಿದುಹಾಕಿದ್ದಾರೆ. ಕಿವಿಎಲುಬು ಪುಡಿಯಾಗಿದೆ. ಯುವಕ ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಿರುವನಂತಪುರಂ ಕಾಂಞಿರಂಪಾರ ಸಾಯಿಕೃಷ್ಣ ಎಂಬ ಯುವಕನನ್ನು ಬುಧವಾರ ಶಾಡೊ ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸಲು ಠಾಣೆಗೆ ಕರೆದೊಯ್ದಿದ್ದರು. ಗಾಂಜಾ ಸೇವಿಸುತ್ತೀಯಾ ಎಂದು ಕೇಳಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿದ್ದಾರೆ. ಸಾಯಿಕೃಷ್ಣನನ್ನುಪೆರೂರ್‌ಕ್ಕಡದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆತನನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆ ಕರೆದೊಯ್ಯಲಾಗಿದೆ.
ಸೊಂಟ ಮತ್ತು ಕಿವಿಯ ಎಲುಬು ಪುಡಿಯಾಗಿದೆ. ಹುಡುಗಿಯ ತಾಯಿ ನೀಡಿದ ದೂರಿನ ಪ್ರಕಾರ ಯುವಕನನ್ನು ಬಂಧಿಸಲಾಗಿತ್ತು. ಕೇರಳ ವಿಧಾನಸಭೆಯಲ್ಲಿ ಹುಡುಗಿಯ ತಾಯಿ ಕೆಲಸ ಮಾಡುತ್ತಿದ್ದು ಹುಡುಗಿಯನ್ನು ಪ್ರೀತಿಸುತ್ತಿದ್ದ ಸಾಯಿಕೃಷ್ಣನನ್ನು ಅವಳಿಂದ ದೂರ ಮಾಡಲಿಕ್ಕಾಗಿ ಪ್ರಯತ್ನಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಯುವಕನನ್ನು ಬಂಧಿಸಿದ ಪೊಲೀಸರು ಸರಿಯಾಗಿ ಬೆಂಡೆತ್ತಿದ್ದಾರೆ. ಈಗ ಇದು ಕೇರಳದ ಇನ್ನೊಂದು ಕಸ್ಟಡಿ ದೌರ್ಜನ್ಯವಾಗಿ ಪರಿಣಮಿಸಿದೆ ಎಂದು ಮೀಡಿಯಾ ವನ್ ವರದಿ ತಿಳಿಸಿದೆ.