ಬಿಸಿಲು ಬಯಲು ನೆಳಲು ಹೀಗೊಂದು ಸಿನೆಮಾ ಕುರಿತ ಪುಸ್ತಕ

Update: 2017-01-13 16:47 GMT

ಲೇಖಕ ಶ್ರೀಪಾದ ಭಟ್ರವರು ಬರೆದಿರುವ ಹೊಸ ಅಲೆಯ ಸಿನೆಮಾಗಳ ಕುರಿತಾದ ಪುಸ್ತಕ ಬಿಸಿಲು ಬಯಲು ನೆಳಲು. ಸಿನೆಮಾಗಳ ಕುರಿತಾಗಿ ವಿಮರ್ಶೆಗಳು ಬರುತ್ತಿರುತ್ತವೆಯಾದರೂ ಒಂದು ಸೈದ್ಧಾಂತಿಕ ಗ್ರಹಿಕೆಯ ಹಿನ್ನೆಲೆಯಲ್ಲಿ ವಿಮರ್ಶೆಯಾಗುವುದು ಕಡಿಮೆ; ಈ ಕಾರಣದಿಂದಾಗಿ ಹೊಸ ಅಲೆಯ ಸಿನೆಮಾ ಕುರಿತಾದ ಈ ಬರವಣಿಗೆ ವಿಶಿಷ್ಟವೆನಿಸುತ್ತದೆ. ಮನರಂಜನಾತ್ಮಕವಾಗಿಯೇ ಬಹುಜನ ಸಿನೆಮಾಗಳನ್ನು ಗುರ್ತಿಸುವುದರ ಪರಿಣಾಮವಾಗಿ ಸಿನೆಮಾದ ಚಿಂತನಾ ಆಯಾಮ ಸಂಕುಚಿತಗೊಂಡಂತೆ ಭಾಸವಾದರೂ ಹೊಸ ಅಲೆಯ ಸಿನೆಮಾಗಳು ಜನರ ಮನಸ್ಸಿನಲ್ಲಿ ಉಂಟುಮಾಡಿರುವ, ಮಾಡಬಹುದಾದಂತಹ ಯೋಚನೆಗಳನ್ನು ಈ ಪುಸ್ತಕ ಓದುಗರಿಗೆ ತೆರೆದಿಡುತ್ತದೆ.

ನಿಯೋ-ರಿಯಲಿಸಂನ ಕಾಲಘಟ್ಟದಲ್ಲಿ ಸಿನೆಮಾಗಳ ಕುರಿತು ಪಾಶ್ಚಾತ್ಯ ದೇಶಗಳಲ್ಲಾದ ಚಿಂತನೆ ಮತ್ತು ವಿಶಿಷ್ಟ ಪ್ರಯೋಗಗಳು, ಭಾರತದ ಮೇಲಾದ ಅದರ ಪರಿಣಾಮ, ಪ್ರಗತಿಗಾಮಿ ಚಳವಳಿ ಹುಟ್ಟು, ಹೊಸ ಅಲೆಯ ಸಿನೆಮಾಗಳ ಬೆಳವಣಿಗೆ, ಜನಸಾಮಾನ್ಯರನ್ನು ಆಕರ್ಷಿಸಿದ ರೀತಿ ಮತ್ತು ನಿರ್ದೇಶಕರ ಸಾಮಾಜಿಕ ಪ್ರಜ್ಞೆ ಇವುಗಳನ್ನೆಲ್ಲಾ ವಿವರಿಸಲಾಗಿದೆ. 19ನೆ ಶತಮಾನದ ಆರಂಭದ ಕಾಲದಿಂದ ಹಿಡಿದು 21ನೆ ಶತಮಾನದ ವರೆಗೂ ಹೊಸ ಅಲೆಯ ಸಿನೆಮಾಗಳ ಬೆಳವಣಿಗೆ, ಪ್ರಯೋಗಗಳ ಬಗ್ಗೆ ವಿವರಣೆ ಇರುವುದು ಕಾಣಬಹುದು.

ಇಟಲಿ, ಫ್ರಾನ್ಸ್ ನಂತಹ ದೇಶಗಳಲ್ಲಿ ಉಂಟಾದ ಸಾಮಾಜಿಕ ಆಂದೋಲನ, ರಾಜಕೀಯ ಬೆಳವಣಿಗೆ, ಇವುಗಳ ಕಾರಣದಿಂದ ಉಂಟಾದ ಅವಸ್ಥೆಗಳು, ಸುಧಾರಣೆಗಳು, ಇದರ ನಡುವೆ ಬದುಕುವ ಸಾಮಾನ್ಯ ಜನರು ಇವುಗಳನ್ನೆಲ್ಲಾ ತೋರಿಸಿದ್ದು ನಿಯೋರಿಯಲಿಸಂ ಸಿನೆಮಾ ಎನಿಸಿಕೊಂಡಿತ್ತು ಈ ಕಾಲದಲ್ಲಿ ಬಂದಂತಹ ಸಿನೆಮಾ, ಅದರ ವಸ್ತು ಮತ್ತು ಆರಿಸಿಕೊಂಡಂತಹ ನಟ ನಟಿಯರು ಇವೆಲ್ಲಾ ಮುಖ್ಯಧಾರೆಯ ಸಿನೆಮಾಗಿಂತ ಹೇಗೆ ಭಿನ್ನವಾಗಿ ಜನಸಾಮಾನ್ಯರನ್ನು ಆಕರ್ಷಿಸಿತು; ಎಂಬುದು ಇಲ್ಲಿ ಕಾಣಬಹುದು.

ಪುಸ್ತಕವನ್ನು ಮುಖ್ಯವಾಗಿ ಎರಡು ಅಧ್ಯಾಯಗಳಲ್ಲಿ ಓದಬಹುದು. ಮೊದಲನೆ ಭಾಗದಲ್ಲಿ ಪಾಶ್ಚ್ಯಾತ್ಯ ಮತ್ತು ಭಾರತದ ಪ್ರಾದೇಶಿಕ ಸಿನೆಮಾಗಳ ಹೊಸ ಪ್ರಯೋಗಗಳ ಕುರಿತಾದದ್ದು. ಪ್ರಾರಂಭ ಕಾಲದ ನಿಯೋರಿಯಲಿಸಂ, ಅದರ ಆರಂಭ ಕಾಲದ ಚಿತ್ರಗಳು, ಅಲ್ಲಿನ ನಿರ್ದೇಶಕರು, ಚಿತ್ರದಕಲ್ಪನೆ, ವಸ್ತು ಮತ್ತು ಪ್ರಾದೇಶೀಕ ಭಾಷೆಗಳಾದ ಬೆಂಗಾಲಿ, ತಮಿಳು, ಮಲಯಾಳಂ, ಮರಾಠಿ, ತೆಲುಗು, ಕನ್ನಡ ಭಾಷೆಗಳಲ್ಲಿ ಬಂದಂತಹ ಹೊಸ ಅಲೆಯ ಸಿನೆಮಾಗಳು, ನಿರ್ದೇಶಕರು ಇವುಗಳನ್ನೆಲ್ಲಾ ವಿವರಿಸಿರುವುದು ಮೊದಲ ಭಾಗದಲ್ಲಿ.

ಈ ಭಾಗದಲ್ಲಿ ಕಾಣಬಹುದಾದ ಒಂದು ಮುಖ್ಯ ಅಂಶವೆಂದರೆ ‘‘ಸಮಾಜದ ಯೋಚನೆ ಬದಲಾವಣೆಯಾಗುವುದು ಎಂದರೆ ಅಲ್ಲಿನ ಸಮಾಜದ ಎಲ್ಲಾ ಅಂಗಾಂಗಗಳೂ, ಚಟುವಟಿಕೆಗಳೂ ಮತ್ತು ಆ ಸಮಾಜದ ಸದಸ್ಯರು ಬಯಸುವ ಅಗತ್ಯತೆಗಳೂ ಬದಲಾಗುತ್ತವೆ ಎಂಬುದು’’ ಇದು ಆಯಾಕಾಲದ, ಪ್ರದೇಶದ ಸಿನೆಮಾಗಳ ಮೇಲೆ ಯಾವರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಲೇಖಕರು ಗುರ್ತಿಸಿರುವುದನ್ನು ಕಾಣಬಹುದು. ಹೊಸ ಅಲೆಯ ಚಿತ್ರಗಳನ್ನು ಇಲ್ಲಿ ಗಮನಿಸಿರುವುದು ಸಮಾಜದ ಜೊತೆಗಿನ ಸ್ಪಂದನೆಗಾಗಿ, ಮುಖ್ಯಧಾರೆಯ ಸಿನೆಮಾಗಳು, ಮೆಲೋಡ್ರಾಮಾಗಳು ಜನರೊಂದಿಗೆ ಸ್ಪಂದಿಸುತ್ತವೆಯಾದರೂ ಅದು ಮನರಂಜನೆಯಲ್ಲಿ, ಹಾಸ್ಯದಲ್ಲಿ ಮಾಯವಾಗುವ ಸಂಭವವಿರುತ್ತದೆ. ಈ ರೀತಿ ಮನರಂಜನೆಯಲ್ಲಿ ಭಾವನೆ, ಸಾಮಾಜಿಕ ಕಳಕಳಿ ಮರೆಯದ ರೀತಿಯಲ್ಲಿ ಹೊಸ ಅಲೆಯ ಸಿನೆಮಾಗಳು ಜನರನ್ನು ತಲುಪುವುದು, ತಲುಪಿಸುವುದು ಸವಾಲಿನ ಕೆಲಸ. ಇದಕ್ಕೆ ನಿದರ್ಶನಗಳನ್ನು ಕೊಡುತ್ತಾ ರುತ್ವಿಕ್ ಘಟಕ್, ಸತ್ಯಜಿತ್ರೇ, ಡಿ ಸಿಕಾ, ಜಾನ್‌ಅಬ್ರಾಹಂ, ನಾಗ್ರಜ ಮಂಜಲೆ ಮುಂತಾದ ನಿರ್ದೇಶಕರ ಸಿನೆಮಾಗಳು ಸಮಾಜದ ಯಾವಯಾವ ವರ್ಗದ, ಯಾವಯಾವ ವಿಷಯದ ಕುರಿತಾದ ಸಿನೆಮಾಗಳು ಎಂಬುದನ್ನು ವಿವರಿಸಿದ್ದಾರೆ.

ಒಂದು ಚಿಂತನಾಧಾರೆಯ ಮೂಲಕ ಸೃಷ್ಟಿಗೊಳ್ಳುವ ಸಿನೆಮಾ ಜನಾಕರ್ಷಣೆಗೆ ಒಳಗಾಗಲು ಅನೇಕ ರೀತಿಯ ತೊಂದರೆಗಳಿರುತ್ತವೆ, ಮೆಲೋಡ್ರಾಮನಂತಹ ಸಿದ್ಧ ಚೌಕಟ್ಟನ್ನು ಮುಂಬೈ ಫಾರ್ಮುಲದಂತಹ ಆಕರ್ಷಕ ಚೌಕಟ್ಟನ್ನು ಮೀರಿ ಸಿನೆಮಾ ನಿರ್ಮಾಣವಾದಾಗ ಅದು ಗೆಲ್ಲುತ್ತದೆಯೇ ಎಂಬ ಸಂಶಯಗಳೊಂದಿಗೆ ಸಂದೇಶ ಜನರಿಗೆ ತಟ್ಟುತ್ತದೆಯೇ ಎಂಬಂತಹ ಮುಖ್ಯ ಪ್ರಶ್ನೆಗಳು ಹೊಸ ಅಲೆಯ ಸಿನೆಮಾಗಳ ಕುರಿತು ಬರದೇ ಇರದು; ಆದರೂ ಜನರನ್ನು ಆಕರ್ಷಿಸಿ ಹೇಳಬೇಕಾದ ವಿಷಯ ಹೇಳಿ ಯಶಸ್ವಿಯಾಗುವುದು ಸವಾಲಿನ ಕೆಲಸ ಇದಕ್ಕೆ ಬೆಂಗಾಲಿ, ತಮಿಳು, ಮಲಯಾಳಂ ಭಾಷೆಗಳ ಹೊಸ ಅಲೆಯ ಸಿನೆಮಾಗಳನ್ನು ಉದಾಹರಣೆ ನೀಡುತ್ತಾರೆ.

ಇನ್ನೊಂದು ಮುಖ್ಯವಾದ ಅಂಶ ಈ ಪುಸ್ತಕವನ್ನು ಓದಿದ ನಂತರ ಅನ್ನಿಸುವುದು; ಸಿನೆಮಾ ಜನರನ್ನು ಯಾವ ಉದ್ದೇಶಕ್ಕಾಗಿ ಆಕರ್ಷಿಸಬೇಕು ಎಂಬುದು. ಅದು ಕೇವಲ ಮನರಂಜನೆಯೇ ಜನರ ಭ್ರಮೆ, ಅಥವಾ ವಾಸ್ತವದ ಭೀಕರತೆಯನ್ನು ಮರೆಸುವ ಸಾಧನವಾಗಿ? ಇಂತಹ ಅನೇಕ ಪ್ರಶ್ನೆಗಳನ್ನಿಟ್ಟುಕೊಂಡು ಲೇಖಕರು ಚರ್ಚಿಸುತ್ತಾರೆ
ಮೊದಲ ಭಾಗದಲ್ಲಿ ಲೇಖಕರು ಹೇಳಬೇಕಾದ ಹೊಸ ಅಲೆಯ ಸಿನೆಮಾಗಳ ಬಗೆಗೆ ಒಂದು ಸೈದ್ಧಾಂತಿಕ ನಿರೂಪಣೆ ಇದೆ. ಮುಂದಿನ ಭಾಗದಲ್ಲಿ ಈ ಗ್ರಹಿಕೆಯ ಮೂಲಕ ತಾವು ನೋಡಿರುವ ಸಿನೆಮಾಗಳನ್ನು ವಿಮರ್ಶಿಸಿದ್ದಾರೆ. ಅದುಕತೆಯ, ನಿರ್ದೇಶನದ, ಸಾಮಾಜಿಕ ವಾಸ್ತವತೆಯ ಜೊತೆಗೆ ಆಯಾ ಕಾಲಘಟ್ಟದ ಪ್ರಯತ್ನಗಳ ಕುರಿತು ಯೋಚಿಸಿರುವುದನ್ನು ಕಾಣಬಹುದು.

ಎರಡನೆ ಭಾಗದಲ್ಲಿ ಭಾರತದ ಹೊಸ ಅಲೆಯ ಸಿನೆಮಾಗಳಲ್ಲಿ ಕೆಲವು ಮುಖ್ಯ ಸಿನೆಮಾಗಳನ್ನು ವಿಮರ್ಶಿಸಿದ್ದಾರೆ. ರುತ್ವಿಕ್ ಘಟಕ್, ಸತ್ಯಜಿತ್ರೇ, ಗಿರೀಶ್ ಕಾಸರವಳ್ಳಿ, ಮೃಣಾಲ್ ಸೇನ್, ಎಂಎಸ್ ಸತ್ಯು, ಶಾಂಬೆನಗಲ್, ಶಾಂತಾರಾಂ, ಬಿ ವಿ ಕಾರಂತ್, ಗೋವಿಂದ ನಿಹಲಾನಿ, ಪರಾಂಜಪೆ, ಕೇತನ್ ಮೆಹ್ತ, ಮೀರಾನಾಯರ್, ಜಾನ್‌ಅಬ್ರಾಹಂ, ತಮ್ಹಾನೆ, ನಾಗ್ರಾಜ ಮಂಜಲೆರವರು ನಿರ್ದೇಶಿಸಿದ ಸಿನೆಮಾಗಳ ಬಗ್ಗೆ ಬರೆಯಲಾಗಿದೆ. ಈ ಎಲ್ಲಾ ಸಿನೆಮಾಗಳಲ್ಲಿ ನಿಯೋರಿಯಲಿಸಂ ಹಾಗೂ ಪ್ರಗತಿಪರ ಚಿಂತನೆಗಳು ಆ ಸಿನೆಮಾ ನಿರ್ದೇಶಕರು ಬಳಸಿರುವ ನೂತನ ಪ್ರಯೋಗಗಳನ್ನು ಗುರುತಿಸಿದ್ದಾರೆ.

ಪ್ರಗತಿಪರ ಯೋಚನೆಯುಳ್ಳ ನಿರ್ದೇಶಕರು, ಅವರು ಆಯ್ಕೆಮಾಡುವ ಚಿತ್ರಕತೆ, ನಟ-ನಟಿಯರು, ಹೀಗೆ ಪ್ರತಿಯೊಂದನ್ನು ಸಂದರ್ಭಕ್ಕೆ ತಕ್ಕಂತೆ ಚರ್ಚಿಸಿದ್ದಾರೆ. ಕನ್ನಡ ಚಿತ್ರಗಳು ಈ ಸಂದರ್ಭವನ್ನು ಮುಖಾಮುಖಿಯಾದ ಸಂದರ್ಭ, ಕನ್ನಡದ ಹೊಸಪ್ರಯೋಗಗಳನ್ನು ಸಹ ಗುರುತಿಸಿದ್ದಾರೆ, ಕನ್ನಡ ಹೊಸ ಅಲೆ ಸಿನೆಮಾ ಬೇರೆ ಭಾಷೆಗಳ ಸಿನೆಮಾಗಳಂತೆ ಮುಖ್ಯ ನೆಲೆಗೆ ಬಾರದಿರುವುದರ ಬಗೆಗೂ ಬರೆದಿದ್ದಾರೆ.

ಈ ಪುಸ್ತಕ ಅನೇಕ ಸೈದ್ಧಾಂತಿಕ ಯೋಚನೆಗಳ ಹಿನ್ನೆಲೆಯಲ್ಲಿ ಬರೆದರೂ ಅದು ಓದುಗರಿಗೆ ಸರಳವಾಗಿ ಅರ್ಥೈಸುವ ದಾಟಿಯಲ್ಲಿರುವುದು ಬಹಳಮುಖ್ಯವಾಗಿ ಗಮನಿಸಬೇಕಾದದ್ದು ಹಾಗೆಯೇ ವಿಮರ್ಶೆಯ ದೃಷ್ಟಿಯಿಂದ ವಿಮರ್ಶಕ ಒಂದು ಕಾಲಘಟ್ಟದಲ್ಲಿ ನಿಂತು ಬರೆಯುತ್ತಿರುತ್ತಾನೆಯಾದರೂ ಆತ ಕಳೆದು ಹೋದಕಾಲದಲ್ಲಿ ಚಲಿಸುತ್ತಾ ವಾಸ್ತವದ ಸಂದರ್ಭಕ್ಕೆ ಮರಳಿ ಪುನರಾವಲೋಕನ ಮಾಡುತ್ತಾನೆ. ಹಾಗೆ ಮಾಡದಿದ್ದಲ್ಲಿ ಆ ವಿಮರ್ಶಕ ಸಫಲನಾಗುವುದು ಕಡಿಮೆ. ಈ ಪುಸ್ತಕದಲ್ಲಿ ಲೇಖಕರು ವಾಸ್ತವವನ್ನು ಹಿಂದಿನ ಕಾಲದ ಚಿಂತನೆಯ ಜೊತೆ ಪರಾಮರ್ಶಿಸಿದ್ದಾರೆ.

ಸಿನೆಮಾ ಕುರಿತ ಗಂಭೀರ ಚಿಂತನೆಯುಳ್ಳ ಪುಸ್ತಕ ಹಾಗೆಯೇ ಮುನ್ನುಡಿಯಲ್ಲಿ ವಿಬಿ ತಾರಕೇಶ್ವರ್‌ರವರು ಹೇಳಿರುವ ಹಾಗೆ ಸಾಮಾಜಿಕ ಬದ್ಧತೆಯುಳ್ಳ ಚಿತ್ರ ನೋಡುಗರಾಗಿ ಲೇಖಕರು ವಿಮರ್ಶೆಯ ಮುಖ್ಯ ವಿಚಾರವನ್ನು ಓದುಗರೊಂದಿಗೆ ಚರ್ಚಿಸಿದ್ದಾರೆ.

Writer - -ಅರ್. ಗೋಪಾಲ ಕೃಷ್ಣ

contributor

Editor - -ಅರ್. ಗೋಪಾಲ ಕೃಷ್ಣ

contributor

Similar News