ಮೋಹನ್‌ಲಾಲ್ ಚಿತ್ರಕ್ಕೆ 600 ಕೋಟಿ ರೂ. ಬಜೆಟ್!

Update: 2017-01-13 16:51 GMT

ಒಪ್ಪಂ, ಪುಲಿಮುರುಗನ್ ಚಿತ್ರಗಳ ಪ್ರಚಂಡ ಯಶಸ್ಸಿನ ಬಳಿಕ ಮೋಹನ್‌ಲಾಲ್ ಇದೀಗ ಇನ್ನೊಂದು ಭಾರೀ ವೆಚ್ಚದ ಚಿತ್ರವೊಂದರಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಮಲಯಾಳಂನ ಜ್ಞಾನಪೀಠ ಪುರಸ್ಕೃತ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಅವರ ‘ರಂಡಾಂಮೂಳಂ’ ಕೃತಿಯನ್ನು ಆಧರಿಸಿದ ಈ ಚಿತ್ರ ಮೋಹನ್‌ಲಾಲ್ ಅವರ ಸಿನೆಮಾ ಜೀವನದಲ್ಲೇ ಅತಿ ದೊಡ್ಡ ಮೈಲುಗಲ್ಲಾಗಲಿದೆ. ಬರೋಬ್ಬರಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಂಡಾಂಮೂಳಂ, ಪುರಾತನ ಮಹಾಕಾವ್ಯ ಮಹಾಭಾರತದ ಕಥೆಯನ್ನು ಆಧರಿಸಿದೆ.

ಅಂದ ಹಾಗೆ ಈ ಚಿತ್ರಕ್ಕೆ ಎಂ.ಟಿ. ವಾಸುದೇವನ್ ನಾಯರ್ ಅವರೇ ಚಿತ್ರಕಥೆ ಬರೆದಿದ್ದಾರೆ. ಈಗ ಬಲವಾಗಿ ಕೇಳಿಬರುತ್ತಿರುವ ವದಂತಿಗಳ ಪ್ರಕಾರ, ಜಾಹೀರಾತು ಚಿತ್ರಗಳ ನಿರ್ದೇಶಕರಾಗಿ ದುಡಿದಿರುವ ಶ್ರೀಕುಮಾರ್ ಮೆನನ್ ಈ ಬಿಗ್‌ಬಜೆಟ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸ್ವತಃ ಮೋಹನ್‌ಲಾಲ್ ಈ ವಿಷಯವನ್ನು ಇತ್ತೀಚೆಗೆ ಮಲಯಾಳಂ ಸುದ್ದಿ ಚಾನೆಲೊಂದರ ಮುಂದೆ ಬಹಿರಂಗಪಡಿಸಿದ್ದಾರೆ. ಇದಕ್ಕೂ ಮೊದಲು ಖ್ಯಾತ ನಿರ್ದೇಶಕ ಹರಿಹರನ್ ರಂಡಾಂಮೂಳಂ ಕಾದಂಬರಿಯನ್ನು ಆಧರಿಸಿ ಚಿತ್ರವೊಂದನ್ನು ನಿರ್ಮಿಸುವ ಯೋಚನೆಯಲ್ಲಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗದೆ ಹೋಯಿತು.

ಈಗ ಮೋಹನ್‌ಲಾಲ್ ನಾಯಕನಾಗಿರುವ ಈ ಚಿತ್ರದಲ್ಲಿ ಬಹುಭಾಷಾ ನಟ,ನಟಿಯರ ದಂಡೇ ಇದೆ. ಅಮಿತಾಭ್‌ಬಚ್ಚನ್, ವಿಕ್ರಮ್, ಐಶ್ವರ್ಯಾ ರೈ ಹಾಗೂ ಮಂಜು ವಾರಿಯರ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್ ಬಹಳ ಸಮಯದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ವಾಪಸಾಗಿದ್ದಾರೆ. ಕೆ.ಯು.ಮೋಹನನ್, ‘ರಂಡಾಂಮೂಳಂ’ಗೆ ಕ್ಯಾಮರಾ ಹಿಡಿಯಲಿದ್ದಾರೆ. ಚಿತ್ರ ಮುಂದಿನ ವರ್ಷ ಸೆಟ್ಟೇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News