ಸರಳ, ಸುಂದರ ಸಾಮಾಜಿಕ ದೃಶ್ಯಕಾವ್ಯ ಆನಕಲ್ಲಿ

Update: 2017-01-13 16:59 GMT

ಸರಳ, ಸುಂದರ ದೃಶ್ಯಕಾವ್ಯವಾಗಿ ತೆರೆದುಕೊಳ್ಳುವ ‘‘ಆನಕಲ್ಲಿ’’ ವಿನೂತನ ಪ್ರಯೋಗಗಳ ಕಿರುಚಿತ್ರ. ಕರ್ನಾಟಕ-ಕೇರಳ ಗಡಿಭಾಗ ಮಂಜೇಶ್ವರದ ಕಣ್ವತೀರ್ಥದ ಸುರಮ್ಯ ಪ್ರಕೃತಿಯ ಮಡಿಲಲ್ಲಿ ಚಿತ್ರೀಕೃತವಾದ 80 ನಿಮಿಷಗಳ ಈ ಚಿತ್ರದ ನಿರ್ಮಾಪಕ, ನಿರ್ದೇಶಕ, ತಂತ್ರಜ್ಞ, ಉದ್ಯಾವರ ಮೂಲದ, ಈಗ ಮಂಗಳೂರು ನಿವಾಸಿಯಾಗಿರುವ ಯುವಪ್ರತಿಭೆೆ, ಚಿದಾನಂದ ನಾರಾಯಣ ಉದ್ಯಾವರ.

68 ಸದಸ್ಯರಿರುವ ಚಿತ್ರತಂಡದ ನಟರು, ಬೆಂಬಲಿಗರು, ಸಹಾಯಕರು ಎಲ್ಲರೂ ಹೊಸಬರೇ. ಚಿತ್ರದಲ್ಲಿ ವ್ಯಕ್ತವಾಗಿರುವ ಸಾಮಾಜಿಕ ವೌಲ್ಯಗಳ ಕಳಕಳಿ, ನಿರ್ದೇಶಕನ ಅಂತರ್ಯವೇ ಆಗಿದೆ.

ಚಿತನಿರ್ಮಾಣಕ್ಕೆ ತಗಲಿದ ಒಟ್ಟು ವೆಚ್ಚ ರೂ. 50,000- ಗ್ರಾಮವಾಸಿಗಳೇ ಆದ ನಟರನ್ನು ಧ್ವನಿ ಪರೀಕ್ಷೆಯ ಮೂಲಕ ಆಯ್ದುಕೊಳ್ಳಲಾಯಿತು. ವೆಚ್ಚ ಹೆಚ್ಚದಂತೆ ಹಳೆಯ ಮನೆಯೊಂದರಲ್ಲಿ ಡಬ್ಬಿಂಗ್ ನಡೆಸಲಾಯಿತು. ಸಂಗೀತ್ ಬಹಾರ್ ಸ್ಟುಡಿಯೋ, ಮಂಗಳೂರು, ಇಲ್ಲಿ ಸಂಗೀತದ ಧ್ವನಿ ಮುದ್ರಣ ಮಾಡಿಕೊಳ್ಳಲಾಯ್ತು. ಸೆಪ್ಟಂಬರ್ 10ಕ್ಕೆ ಆರಂಭವಾದ ಚಿತ್ರೀಕರಣ, ಡಿಸೆಂಬರ್ 5ರಂದು ಸಂಪೂರ್ಣಗೊಂಡಿತು. ಹದಿನೈದು ದಿನಗಳಲ್ಲಿ ಎಡಿಟಿಂಗ್ ಮಾಡಿ ಮುಗಿಸಲಾಯಿತು. ಸಂಪೂರ್ಣ ಚಿತ್ರನಿರ್ಮಾಣದಲ್ಲಿ ನಟರು, ಸಹಾಯಕರಲ್ಲಿ ಹಣದ ವ್ಯವಹಾರ ಶೂನ್ಯ. ಕೇವಲ ಆಸಕ್ತಿಯಿಂದ ಪಾಲ್ಗೊಂಡ ಚಿತ್ರತಂಡವದು. ಮಲಯಾಳ, ಮೋಯ ಮಲಯಾಳ, ತುಳು ಹಾಗೂ ಕನ್ನಡ ಭಾಷೆಗಳ ಪ್ರಯೋಗದ ಈ ಚಿತ್ರದ ಉದ್ದೇಶ, ಆನ್‌ಲೈನ್ ಪ್ರಸಾರದಿಂದ ಭಾಷಾ ಪ್ರೇಮವನ್ನು ಹೆಚ್ಚಿಸುವುದು, ಗ್ರಾಮದ ಯುವಜನಾಂಗದ ಪ್ರತಿಭಾ ಶೋಧ ಹಾಗೂ ಸಮಾಜದ ಒಗ್ಗಟ್ಟು.ಚಿತ್ರೀಕರಣದಲ್ಲಿ ಡಿ.ಎಸ್.ಎಲ್.ಆರ್. ಕ್ಯಾಮರಾದೊಂದಿಗೆ ಡ್ರೋನ್ ಕ್ಯಾಮರಾವನ್ನೂ ನಿರ್ದೇಶಕ ಬಳಸಿಕೊಂಡಿದ್ದಾರೆ.

ವಿದೇಶದ ನೌಕರಿಯ ಆಸೆಗೆ ಬೆಂಬಿದ್ದು, ಅದು ವಿಫಲವಾದಾಗ ಇತರರ ಏಳ್ಗೆಯ ಬಗ್ಗೆ ಕರುಬಿ, ಕಡಲಿಗೆ ಹಾರಿ ಜೀವ ಕಳಕೊಳ್ಳುವ ಯತ್ನದಲ್ಲಿ ಗೆಳೆಯ ಚಂದ್ರನಿಂದ ಬದುಕಿಸಲ್ಪಡುವ ಆಕಾಶ್, ಹಾಗೂ ದುಬೈಯಿಂದ ಊರಿಗೆ ಬರುವ ಗೆಳೆಯ ಸುನೀಲ್ ಈ ಮೂವರ ಸುತ್ತ ಸುತ್ತುವ ಕಥೆಯಲ್ಲಿ ಧೀರ, ಗಂಭೀರ ವ್ಯಕ್ತಿತ್ವದ ನಾಯಕಿ ಕವಿತಾ ಮನ ಸೆಳೆಯುತ್ತಾಳೆ. ರಾಜಕುಮಾರನಂತಿರುವ ತನ್ನ ಮಗನಿಗೆ ಸರಿಹೊಂದಲು ಬ್ಯೂಟಿ ಪಾರ್ಲರ್‌ಗಾದರೂ ಹೋಗಿ ಬಾ, ಎಂದು ಭಾವೀ ಅತ್ತೆಯಿಂದ ಹೇಳಿಸಿಕೊಳ್ಳುವ ಕವಿತಾಳ ಪಾತ್ರದಲ್ಲಿ ನಿರೀಕ್ಷಾ ಉದ್ಯಾವರ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾಳೆ. ಚಂದ್ರನಾಗಿ ಅರ್ಪಿತ್ ಉದ್ಯಾವರ್ ನಟನೆ ಮನೋಜ್ಞವಾಗಿದೆ. ಸುನೀಲ್‌ನ ಪಾತ್ರದಲ್ಲಿ ಪುನೀತ್ ಮಾಧವ ಉದ್ಯಾವರ್, ಆಕಾಶ್‌ನ ಪಾತ್ರದಲ್ಲಿ ಅಭಿಲಾಷ್ ಉದ್ಯಾವರ್, ಸುನೀಲ್‌ನ ತಾಯಿಯ ಪಾತ್ರದಲ್ಲಿ ಶಾಲಿನಿ ಬೆಂಗರೆ, ಜ್ಯೋತಿಷಿಯಾಗಿ ಆನಂದ್ ಉದ್ಯಾವರ್ ಹೀಗೆ ತೆರೆದುಕೊಳ್ಳುವ ಪಾತ್ರಗಳು ಚಿತ್ರವನ್ನು ಜೀವಂತವಾಗಿರಿಸಿವೆ.
 
ಸಾಹಿತಿ ಡಾ. ಅಮೃತಸೋಮೇಶ್ವರರ ‘‘ಹೃದಯ ವಚನಗಳು’’, ಗಾಯಕ ಇಮ್ತಿಯಾಝ್ ಅವರ ಕಂಠದಲ್ಲಿ ಸುಶ್ರಾವ್ಯವಾಗಿ, ಹೃದಯಂಗಮವಾಗಿ ಮೂಡಿವೆ. ಕವಿ ರಿಯಾಝ್ ರಚಿತ, ಅಜರುದ್ದೀನ್ ಹಾಡಿದ ‘‘ಚಿಂಗಡಿ ಕಾಸ್‌ಂಡೆ ಆಸೆಲಿ....’’ ಹಾಡು ಕೂಡಾ ರಂಜಿಸುವಂತಿದೆ. ಮಲಯಾಳ ಭಾಷೆಯಲ್ಲಿರುವ ‘‘ಆನಕಲ್ಲಿ’’ ಟೈಟ್‌ಲ್ ಹಾಡು, ಅನಿಲ್ ಕುಮಾರ್‌ರಿಂದ ರಚಿತವಾಗಿ, ಬಿಜು ವರ್ಗಿಸ್ ಹಾಗೂ ಸ್ವರ್ಣಲತಾ ಅವರ ಕಂಠದಲ್ಲಿ ಮೂಡಿ ಬಂದು ಮನ ಸೆಳೆಯುವಂತಿದೆ.  ಕರಾವಳಿಯಲ್ಲಿ ನೆಲೆನಿಂತ ಚಿಕ್ಕ ಜನಾಂಗವೊಂದರ ಈ ಮಿಶ್ರ ಮಲಯಾಳ ಆಡುಭಾಷೆಯಲ್ಲಿ ಚಲನ ಚಿತ್ರವೊಂದನ್ನು ರಚಿಸ ಬಹುದೆನ್ನುವ ಈ ವಿನೂತನ ವಿಚಾರವೇ ಅದ್ಭುತವಾಗಿದ್ದು, ತನ್ಮೂಲಕ ಸಾಮಾಜಿಕ ಕಳಕಳಿಯ ತನ್ನ ಅಮೂಲ್ಯ ವಿಚಾರಗಳನ್ನು ತೆರೆಯ ಮೇಲೆ ಬಿಂಬಿಸಿದ ಕಲಾವಿದ ಚಿದಾನಂದ ನಾರಾಯಣ ಉದ್ಯಾವರ ನಿಜಕ್ಕೂ ಅಭಿನಂದನೀಯರು. ಜನವರಿ ದಿನಾಂಕ ಮೂರರಂದು ‘ಆನಕಲ್ಲಿ’ ಯೂಟ್ಯೂಬ್ ಸೇರಿದೆ. ಆಸಕ್ತರಿಗೆ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News