×
Ad

ಗಾಂಧೀಜಿಗಿಂತ ಮೋದೀಜಿ ಬೆಟರ್ ಎಂದು ನಾಲಗೆ ಕಚ್ಚಿಕೊಂಡ ಬಿಜೆಪಿ ಸಚಿವ

Update: 2017-01-14 15:22 IST

ಚಂಡಿಗಡ,ಜ.14: ಮಹಾತ್ಮಾ ಗಾಂಧೀಜಿಯವರಿಗಿಂತ ಪ್ರಧಾನಿ ನರೇಂದ್ರ ಮೋದೀಜಿಯವರು ಉತ್ತಮ ಬ್ರಾಂಡ್ ಹೆಸರಾಗಿದ್ದಾರೆ ಎಂದು ಇಂದಿಲ್ಲಿ ಹೇಳಿ ತನ್ನ ಭಟ್ಟಂಗಿತನವನ್ನು ಪ್ರದರ್ಶಿಸಿದ ಹರ್ಯಾಣದ ಬಿಜೆಪಿ ಸರಕಾರದಲ್ಲಿ ಆರೋಗ್ಯ,ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವರಾಗಿರುವ ಅನಿಲ ವಿಜ್ ಅವರು ಕೆಲವೇ ನಿಮಿಷಗಳ ಬಳಿಕ ತನ್ನ ಈ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಅವರ ಈ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿಯು, ಇದು ಪಕ್ಷದ ನಿಲುವಲ್ಲ ಎಂದು ಸ್ಪಷ್ಟನೆ ನೀಡಿದೆ.

ಮಹಾತ್ಮಾ ಗಾಂಧಿಯವರ ಕುರಿತು ತನ್ನ ಹೇಳಿಕೆ ವೈಯಕ್ತಿಕ ಅಭಿಪ್ರಾಯವಾಗಿತ್ತು. ಇದರಿಂದ ಯಾರದೇ ಭಾವನೆಗಳಿಗೆ ನೋವುಂಟಾಗದಿರಲು ತಾನು ಈ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ ಎಂದು ವಿಜ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಹೊಸ ಕ್ಯಾಲೆಂಡರ್ ಮತ್ತು ಟೇಬಲ್ ಡೈರಿಗಳಲ್ಲಿ ಮಹಾತ್ಮಾ ಗಾಂಧಿಯವರ ಬದಲು ಮೋದಿಯವರ ಚಿತ್ರ ಕಾಣಿಸಿಕೊಂಡಿರುವ ವಿವಾದಕ್ಕೆ ಸಂಬಂಧಿಸಿದಂತೆ ವಿಜ್ ಈ ಹೇಳಿಕೆ ನೀಡಿದ್ದರು.

ಕ್ಯಾಲೆಂಡರ್‌ನಲ್ಲಿ ಗಾಂಧಿಯವರ ಚಿತ್ರದ ಬದಲು ಮೋದಿಯವರ ಚಿತ್ರವನ್ನು ಮುದ್ರಿಸಿದ್ದು ಒಳ್ಳೆಯ ಕೆಲಸವಾಗಿದೆ. ಗಾಂಧಿಯವರಿಗಿಂತ ಮೋದಿಯವರು ಉತ್ತಮ ಬ್ರಾಂಡ್ ಹೆಸರು ಆಗಿದ್ದಾರೆ. ಖಾದಿಯು ತನ್ನ ಜೊತೆ ಗಾಂಧಿಯವರ ಹೆಸರನ್ನು ಗುರುತಿಸಿಕೊಂಡಾಗಿನಿಂದ ಆ ಉದ್ಯಮ ಉದ್ಧಾರವಾಗಿಯೇ ಇಲ್ಲ. ಖಾದಿ ಮುಳುಗಿ ಹೋಗಿದೆ ಎಂದು ವಿಜ್ ಹೇಳಿದ್ದರು.

ಅವರ ಆಲಾಪ ಇಷ್ಟಕ್ಕೇ ನಿಂತಿರಲಿಲ್ಲ. ಗಾಂಧಿ ಹೆಸರು ಹೇಗಿದೆಯೆಂದರೆ ಅವರ ಚಿತ್ರ ಕರೆನ್ಸಿ ನೋಟುಗಳ ಮೇಲೆ ಕಾಣಿಸಿಕೊಂಡಾಗಿನಿಂದ ಅದು ಅಪವೌಲ್ಯಗೊಂಡಿದೆ ಎಂದೂ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದ್ದರು.

ವಿಜ್ ಹೇಳಿಕೆಯಿಂದ ಅಂತರವನ್ನು ಕಾಪಾಡಿಕೊಂಡಿರುವ ಬಿಜೆಪಿಯು, ಅದನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದಿದೆ.

ಅದು ವಿಜ್ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಮತ್ತು ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೇಳಿದರು.

ಗಾಂಧೀಜಿಯವರ ಕುರಿತು ವಿಜ್ ಹೇಳಿಕೆಗಳಿಗ ಪ್ರತಿಪಕ್ಷ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

 ಇದು ಅತ್ಯಂತ ದುರ್ದೈವದ ವಿಷಯ. ಇವರೆಲ್ಲ ದೇಶದ ನಾಲಾಯಕ್ ಮಕ್ಕಳು ಎಂದು ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ ಕಿಡಿಕಾರಿದ್ದರೆ, ಇಂತಹ ಆಕ್ಷೇಪಾರ್ಹ ಮತ್ತು ಮೂರ್ಖ ಹೇಳಿಕೆಗಳನ್ನು ಮಾತ್ರ ಬಿಜೆಪಿ ನಾಯಕರು ಮತ್ತು ಸಚಿವರಿಂದ ನಿರೀಕ್ಷಿಸಬಹುದಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News