ಪ್ರಶಸ್ತಿ ಪಟ್ಟಿಯಲ್ಲಿದ್ದರೂ ಫಿಲ್ಮ್‌ಫೇರ್ ವಿರುದ್ಧ ಹರಿಹಾಯ್ದ ಸಂಗೀತ ನಿರ್ದೇಶಕ ಅಮಾಲ್

Update: 2017-01-14 11:40 GMT

ಮುಂಬೈ,ಜ.14: ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನಗಳಲ್ಲಿ ನಡೆಯುತ್ತಿರುವ ಅನ್ಯಾಯಗಳ ಕುರಿತು ಬಹಳಷ್ಟು ಜನರು ಬರೆದಿದ್ದಾರೆ. ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡವರ ಪಟ್ಟಿ ಇತ್ತೀಚಿಗೆ ಪ್ರಕಟಗೊಂಡಾಗ ಅಕ್ಷಯ ಕುಮಾರ್ ಮತ್ತು ಮನೋಜ್ ಬಾಜಪೇಯಿ ಅವರು ಅನುಕ್ರಮವಾಗಿ 'ಏರ್‌ಲಿಫ್ಟ್ ' ಮತ್ತು 'ಅಲಿಗಡ 'ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರೂ ಅವರನ್ನು ನಾಮ ನಿರ್ದೇಶನಕ್ಕೂ ಪರಿಗಣಿಸದಿರುವ ಬಗ್ಗೆ ಟ್ವಿಟರಿಗರು ತೀವ್ರ ಆಕ್ರೋಶವನ್ನು ಪ್ರಕಟಿಸಿದ್ದರು.

ಬಾಕ್ಸ್ ಆಫೀಸ್‌ನ್ನು ಕೊಳ್ಳೆ ಹೊಡೆದಿರುವ 'ದಂಗಲ್ ' ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಫಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾ ಅವರು ವಿಮರ್ಶಕರ ಹೊಗಳಿಕೆಗೆ ಪಾತ್ರರಾಗಿದ್ದರೂ ಫಿಲ್ಮ್‌ಫೇರ್ ನಾಮ ನಿರ್ದೇಶನದಿಂದ ವಂಚಿತರಾಗಿದ್ದಾರೆ.

'ಫಿಲ್ಮ್‌ಫೇರ್ ಪ್ರಶಸ್ತಿ ಮಾರಾಟಕ್ಕಿದೆ 'ಎನ್ನುವುದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ. ತನ್ಮಧ್ಯೆ ಸಂಗೀತ ನಿರ್ದೇಶಕ ಅಮಾಲ್ ಮಲಿಕ್ ಅವರು, ನಿಜಕ್ಕೂ ಅರ್ಹರನ್ನು ಗುರುತಿಸದ್ದಕ್ಕಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭಗಳ ವಿರುದ್ಧ ಕೆಂಡ ಕಾರಿದ್ದಾರೆ.

ಫೇಸ್‌ಬುಕ್‌ನಲ್ಲಿ ತೀಕ್ಷ್ಣವಾದ ಬರಹವನ್ನು ಪೋಸ್ಟ್ ಮಾಡಿರುವ ಮಲಿಕ್ ವ್ಯಾಪಕವಾಗಿರುವ ಸ್ವಜನ ಪಕ್ಷಪಾತದ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. ನೀವು ಅಡ್ಡದಾರಿಗಿಳಿದು ಉದಯೋನ್ಮುಖ ಪ್ರತಿಭೆ ಪ್ರಶಸ್ತಿಯನ್ನು ತಾರೆಯರ ಮಕ್ಕಳಿಗೇ, ಅವರ ನಟನೆಯನ್ನು ಯಾರೂ ನೋಡಿರದಿದ್ದರೂ....ನೀಡುತ್ತಿರುವುದು ತುಂಬ ಹಾಸ್ಯಾಸ್ಪದವಾಗಿದೆ. ಆ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದ 'ಉಡ್ತಾ ಪಂಜಾಬ್ 'ನ ದಿಲ್ಜಿತ್ ದೋಸಾಂಜ್ ನಿಮ್ಮ ಪಟ್ಟಿಯ ಸಮೀಪವೂ ಇಲ್ಲ. 'ಸರಬ್‌ಜಿತ್' ಚಿತ್ರದಲ್ಲಿ ನಟಿಸಿದ ರಣದೀಪ್ ಹೂಡಾ ಆ ಪಾತ್ರಕ್ಕೆ ಜೀವ ತುಂಬಲು ಎಲುಬಿನ ಗೂಡಾಗಿ ತನ್ನನ್ನೇ ತಾನು ಕೊಂದುಕೊಳ್ಳುವ ಹಂತವನ್ನು ತಲುಪಿದ್ದರು. ಆದರೆ ನೀವು ಐಶ್ವರ್ಯಾ ರೈ ಬಚ್ಚನ್ ಅವರನ್ನು ಮಾತ್ರ ನಾಮ ನಿರ್ದೇಶನಗೊಳಿಸಿದ್ದೀರಿ ಎಂದು ಅವರು ಬೆಟ್ಟು ಮಾಡಿದ್ದಾರೆ.

'ಕಪೂರ್ ಆ್ಯಂಡ್ ಸನ್ಸ್ ' ಮತ್ತು 'ಬಾಘಿ' ಚಿತ್ರಗಳಿಗಾಗಿ ಎರಡು ನಾಮ ನಿರ್ದೇಶನಗಳನ್ನು ಪಡೆದಿರುವ ಮಲಿಕ್ ಸ್ವತಃ ತನ್ನನ್ನೂ ಬಿಟ್ಟಿಲ್ಲ. ''ಬಾಘಿ ಚಿತ್ರಕ್ಕಾಗಿ ನನ್ನ ನಾಮ ನಿರ್ದೇಶನ ನನಗೇ ನಾಚಿಕೆಯನ್ನುಂಟು ಮಾಡಿದೆ. ಈ ಹೇಳಿಕೆಗಾಗಿ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ನನ್ನನ್ನು ದ್ವೇಷಿಸಬಹುದು ಎನ್ನುವುದು ನನಗೆ ಗೊತ್ತು.ಆದರೆ ಅದು ಅತ್ಯಂತ ಕಳಪೆ ಮ್ಯೂಸಿಕ್ ಆಲ್ಬಂ ಆಗಿದೆ. ಹೀಗಿದ್ದರೂ ನನ್ನನ್ನು ನಾಮ ನಿರ್ದೇಶನಗೊಳಿಸಿರುವುದು ಮೋಜಿನದಾಗಿದೆ ಎಂದಿದ್ದಾರೆ.

ಚಿತ್ರರಂಗದಲ್ಲಿ ಹಾಲಿ ಕಾರ್ಯ ನಿರ್ವಹಿಸುವವರನ್ನು ನಿರ್ಣಾಯಕರನ್ನಾಗಿ ನೇಮಕಗೊಳಿಸುವ ಪರಿಪಾಠವನ್ನು ಅವರು ಕಟುವಾಗಿ ಟೀಕಿಸಿದ್ದಾರೆ.

ಪ್ರಶಸ್ತಿಗಳು ಹಾಳು ಬಿದ್ದು ಹೋಗಲಿ. ಆದರೆ ಪ್ರತಿವರ್ಷ ಅರ್ಹ, ಪ್ರತಿಭಾವಂತ ರನ್ನಾದರೂ ಆಯ್ಕೆ ಮಾಡಿ. ಹಾಗೆ ಮಾಡದೇ ನೀವು ನಮ್ಮ ಚಿತ್ರೋದ್ಯಮವನ್ನು ಗೇಲಿ ಮಾಡುತ್ತಿದ್ದೀರಿ ಎಂದಿರುವ ಮಲಿಕ್,ಈ ಪೋಸ್ಟ್‌ನ ಬಳಿಕ ನನಗೆಂದೂ ನಾಮ ನಿರ್ದೇಶನ ದೊರೆಯದಿದ್ದರೂ ಸರಿಯೇ. ನಾನು ಯಾವಾಗಲೂ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಮತ್ತು ಅದಕ್ಕೆ ಅಂಟಿಕೊಳ್ಳುತ್ತೇನೆ ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News