ಉತ್ತರ ಪ್ರದೇಶ: ಚಾಟಿ ಹಿಡಿದು ನಿಂತಿದ್ದಾರೆ 2014ರಲ್ಲಿ ಬಿಜೆಪಿಗೆ ಭರ್ಜರಿ ಬೆಂಬಲ ನೀಡಿದ್ದ ಜಾಟರು
ಲಕ್ನೋ, ಜ.15: "ಮೋದಿ ನಿಮ್ಮ ಸರಕಾರದಲ್ಲಿ ನನ್ನೆಲ್ಲ ಭತ್ತದ ಬೆಳೆ ಸಾಲ ತೀರಿಸಲು ಸರಿಹೋಯಿತು. ಇದೀಗ ದಾನ ನೀಡಲು ಒಣಹುಲ್ಲು ಉಳಿದುಕೊಂಡಿದೆ"- ಎಂಬ ಸಾಲು ಶಾಮ್ಲಿ ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರೇಲರ್‌ನ ಹಿಂಭಾಗದಲ್ಲಿ ಬರೆದಿತ್ತು. ಪಶ್ಚಿಮ ಉತ್ತರಪ್ರದೇಶದಲ್ಲಿ ಜಾಟ್ ಸಮುದಾಯದ ಒಲವು ಈ ಬಾರಿ ಹೇಗಿದೆ ಎನ್ನುವುದಕ್ಕೆ ಸಣ್ಣ ಸ್ಯಾಂಪಲ್ ಇದು.
ಶಾಮ್ಲಿ, ಕೈರಾನಾ, ಮುಝಫ್ಫರ್ ನಗರ ಫೆಬ್ರವರಿ 11ರ ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದೆ. ಕಬ್ಬಿನ ಕಾರ್ಖಾನೆಗಳಿಂದ ಸಿಗುವ ಬೆಲೆ ಅತ್ಯಲ್ಪ; ಕನಿಷ್ಠ ಬೆಂಬಲ ಬೆಲೆ ಸ್ಥಗಿತಗೊಂಡಿದೆ. ಸಾಲದ ಹೊರೆ ಹೆಚ್ಚುತ್ತಿದೆ. ನೋಟು ಅಮಾನ್ಯದಿಂದಾಗಿ ಹಿಂಗಾರು ಬಿತ್ತನೆ ಕುಂಠಿತವಾಗಿದೆ. ಈ ಭಾಗದ ಪ್ರಬಲ ಜಾಟ್ ಸಮುದಾಯ ಈ ಬಾರಿ ಬಿಜೆಪಿಗೆ ತಿರುಗಿಬಿದ್ದಿದೆ. ಬಹುತೇಕ ಎಲ್ಲ ಖಪ್ ಪಂಚಾಯತ್ ಗಳಲ್ಲಿ ಬಿಜೆಪಿಯನ್ನು ಸೋಲಿಸುವ ನಿರ್ಧಾರ ಕೈಗೊಂಡಿರುವುದು ಬಿಜೆಪಿಗೆ ಬಿಸಿತುಪ್ಪವಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಜಾಟ್ ಸಮುದಾಯ ಬಿಜೆಪಿಗೆ ಅದ್ಭುತ ಬೆಂಬಲ ನೀಡಿ, ಕ್ಲೀನ್‌ಸ್ವೀಪ್‌ಗೆ ಕಾರಣವಾಯಿತು. ಆದರೆ ಮುಝಫ್ಫರ್ ನಗರದಲ್ಲಿ ಮೊನ್ನೆ 8ಕ್ಕೆ ಸಭೆ ಸೇರಿದ್ದ 35 ಖಪ್ ಮುಖಂಡರು, ಜಾಟ್ ಆರಕ್ಷಣ್ ಸಂಘರ್ಷ ಸಮಿತಿ ಹೆಸರಿನಲ್ಲಿ ಮತ್ತೆ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಘೋಷಿಸಿದ್ದಾರೆ. ಇದರಲ್ಲಿ ಮುಸ್ಲಿಂ ಜಾಟರು ಕೂಡಾ ಸೇರಿದ್ದರು. ಬಿಜೆಪಿ ಕೋಮುದ್ವೇಷ ಹರಡುತ್ತಿದೆ ಎಂದು ಸಮುದಾಯ ಟೀಕಿಸಿದೆ. ಮೋದಿ ಬಗ್ಗೆ ವ್ಯಾಪಕ ಜನಾಕ್ರೋಶ ಇದೆ ಎನ್ನುವುದು ಸರ್ವ ಖಪ್ ಮಹಾಮಂತ್ರಿ ಚೌಧರಿ ಸುಭಾಷ್ ಬಲಿಯಾನ್ ಅವರ ಹೇಳಿಕೆ.