ಕಣ್ಣು ಕುಕ್ಕುತ್ತಿದೆ ಸೈಕಲ್‌ಗಾಗಿ ಹೆಣಗುತ್ತಿರುವ ಮುಲಾಯಂ ಪುತ್ರನ 5 ಕೋಟಿಯ ಕಾರು

Update: 2017-01-15 04:34 GMT

ಲಕ್ನೋ,ಜ.15: ಸಮಾಜವಾದದ ಚಾಂಪಿಯನ್ ಎಂದು ಬಿಂಬಿಸಿಕೊಳ್ಳುವ ಮೂಲಕ ಎಡಪಂಥೀಯ ಚಿಂತನೆಯ ಮತದಾರರ ಮತ ಸೆಳೆಯುವ ಕನಸು ಕಾಣುತ್ತಿರುವ ಸಮಾಜವಾದಿ ಪಕ್ಷದ ಪ್ರತಿಷ್ಠೆಗೆ ಇದೀಗ ಪೆಟ್ಟು ಬಿದ್ದಿದೆ. ಸೈಕಲ್‌ಗಾಗಿ ಅಪ್ಪ- ಮಗನ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದರೆ, ಮುಲಾಯಂ ಅವರ ಎರಡನೆ ಮಗ ಪ್ರತೀಕ್ ಯಾದವ್ 5 ಕೋಟಿ ಮೌಲ್ಯದ ಕಾರಿನ ಸರದಾರನಾಗುವ ಮೂಲಕ ಪಕ್ಷಕ್ಕೆ ಮುಜುಗರ ತಂದಿದ್ದಾರೆ.

ಜಿಮ್ ಪ್ರೇಮಿಯೂ ಆಗಿರುವ ಪ್ರತೀಕ್ ಸ್ವಂತ ಜಿಮ್ ಕೂಡಾ ಹೊಂದಿದ್ದಾರೆ. ಇದೀಗ ಐದು ಕೋಟಿ ಮೌಲ್ಯದ ಲ್ಯಾಂಬರ್‌ಗಿನಿ ಕಾರು ಖರೀದಿಸಿದ್ದಾರೆ. ರಾಜಕೀಯದಲ್ಲಿ ಹೆಚ್ಚಿನ ಒಲವು ಹೊಂದಿಲ್ಲವಾದರೂ, ಹೈಫೈ ಸಂಸ್ಕೃತಿ, ಐಷಾರಾಮಿ ಬದುಕಿನ ಮೂಲಕ ಇದೀಗ ಬೆಳಕಿಗೆ ಬಂದಿದ್ದಾರೆ.

ಮುಲಾಯಂ ಅವರ ಎರಡನೆ ಪತ್ನಿ ಸಾಧನಾ ಗುಪ್ತ, ಪ್ರತೀಕ್ ತಾಯಿ. ಪ್ರತೀಕ್ ಡೆಹ್ರಾಡೂನ್‌ನಲ್ಲಿ ಓದುತ್ತಿದ್ದಾಗ, ನ್ಯೂಮೋನಿಯಾಗೆ ತುತ್ತಾಗಿದ್ದ. ಆ ಸಂದರ್ಭದಲ್ಲಿ ನೀಡಿದ ಸ್ಟಿರಾಯ್ಡಿ ಚುಚ್ಚುಮದ್ದಿನಿಂದ ಈತನ ತೂಕ 103 ಕೆ.ಜಿ. ಗೆ ಹೆಚ್ಚಿತ್ತು. ಧೀರ್ಘಕಾಲದ ಗೆಳತಿ ಅಪರ್ಣಾ ಬಿಷ್ಞ್ ಅವರನ್ನು ವಿವಾಹವಾಗಿರುವ ಪ್ರತೀಕ್‌ಗೆ ಮೂರು ವರ್ಷದ ಮಗಳಿದ್ದಾಳೆ. ಯುನಿವರ್ಸಿಟಿ ಆಫ್ ಲೀಡ್ಸ್ ಪದವೀಧರರಾಗಿರುವ ಪ್ರತೀಕ್, ಕುಟುಂಬದ ದೊಡ್ಡ ಭೂಹಿಡುವಳಿ ನಿರ್ವಹಿಸುತ್ತಿದ್ದಾರೆ. ಇವನ್ನು ವಾಣಿಜ್ಯ ಹಾಗೂ ವಸತಿ ಸಂಕೀರ್ಣಗಳಾಗಿ ಪರಿವರ್ತಿಸುವುದು ಅವರ ಗುರಿ.

2014ರ ಸಾರ್ವತ್ರಿಕ ಚುನಾವಣೆ ವೇಳೆ ಅಜಂಗಢ ಕ್ಷೇತ್ರದಿಂದ ಪ್ರತೀಕ್‌ಗೆ ಟಿಕೆಟ್ ನೀಡುವಂತೆ ಸಮಾಜವಾದಿ ಪಕ್ಷದ ಒಂದು ಗುಂಪು ಪಕ್ಷದ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಮಗನಿಗೆ ಟಿಕೆಟ್ ನೀಡಲು ತಾಯಿ ಕೂಡಾ ಲಾಬಿ ಮಾಡಿದ್ದರು. ಆದರೆ ಪ್ರತೀಕ್ ಟಿಕೆಟ್ ಪಡೆಯಲು ವಿಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News