5000ರೂ.ಸಾಲ ಕೊಡದ ದಾದಿಗೆ ಇರಿದು ಪರಾರಿಯಾದಾತ ಹೊಳೆಗೆ ಬಿದ್ದು ಮೃತ್ಯು
ಕೊಲ್ಲಂ,ಜ.15: 5,000ರೂಪಾಯಿ ಸಾಲ ಕೊಡದಿದ್ದ ದಾದಿಯನ್ನು ಹಾಲುಮಾರುವ ವ್ಯಕ್ತಿ ಇರಿದು ಗಾಯಗೊಳಿಸಿ ಪರಾರಿಯಾಗಿದ್ದು, ನಂತರ ಸಮೀಪದ ಹೊಳೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದ ಕೊಲ್ಲಂ ಸಮೀಪ ನಡೆದಿದೆ. ದಾದಿ ಲಿಲ್ಲಿಹೆರ್ಮನ್(60) ಎಂಬವರನ್ನು ಹಾಲು ಮಾರಾಟ ಮಾಡುವ ರಾಯ್ ಸನ್ನಿವರ್ಗೀಸ್(53) ಮಾರಣಾಂತಿಕವಾಗಿ ಇರಿದು ಓಡಿಹೋಗಿದ್ದ. ಘಟನೆ ನಡೆದು ಏಳುಗಂಟೆ ಬಳಿಕ ಆರೋಪಿ ಸನ್ನಿವರ್ಗೀಸ್‌ನ ಮೃತದೇಹಕೊಲ್ಲಂನ ತೇವಳ್ಳಿ ಆಶ್ರಮಂ ಶ್ರೀಕೃಷ್ಣಸ್ವಾಮಿ ದೇವಳ ಸಮೀಪದ ಕಾವಡಿಪ್ಪುರಂ ಹೊಳೆಯಲ್ಲಿ ಪತ್ತೆಯಾಗಿದೆ.
ಜರ್ಮನಿಯಲ್ಲಿ ದಾದಿಯಾಗಿದ್ದ ಲಿಲ್ಲಿ ಹೆರ್ಮನ್ ಪತಿ ನಿಧನಗೊಂಡ ಬಳಿಕ ತೇವಳ್ಳಿಯ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಒಂದು ವರ್ಷ ಹಿಂದಿನವರೆಗೂ ಸನ್ನಿ ವರ್ಗೀಸ್ ಅವರಿಗೆ ಹಾಲು ಸರಬರಾಜು ಮಾಡುತ್ತಿದ್ದ. ಲಿಲ್ಲಿಹೆರ್ಮನ್ ಸಮಾಜ ಸೇವೆ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಈ ಹಿಂದೆಯೂ ಸನ್ನಿವರ್ಗೀಸ್ ಮತ್ತು ಪತ್ನಿ ಸಾಲ ಕೇಳಿದ್ದರೂ ಅವರು ಕೊಟ್ಟಿರಲಿಲ್ಲ.
ನಿನ್ನೆ ಸನ್ನಿ ವರ್ಗೀಸ್ ಲಲ್ಲಿಯವರಲ್ಲಿ ಪುನಃ ಸಾಲ ಕೇಳಿದ್ದಾನೆ. ಅವರು ಕೊಡದಿಂದ್ದಕ್ಕಾಗಿ ಕೋಪದಿಂದ ಲಿಲ್ಲಿಯವರನ್ನು ಅಟ್ಟಾಡಿಸಿ ಇರಿದಿದ್ದಾನೆ. ಲಿಲ್ಲಿ ಬೊಬ್ಬೆ ಹೊಡೆಯುವುದು ಕೇಳಿಸಿದ ಹತ್ತಿರದ ಮನೆಯವರು ಬಂದು ಕೂಡಲೇ ಅವರನ್ನು ಆಸ್ಪತ್ರೆಗೆಕರೆದೊಯ್ದಿದ್ದಾರೆ. ಕೊಲ್ಲಂ ವೆಸ್ಟ್ ಪೊಲೀಸರು ಕೇಸು ದಾಖಲಿಸಿ, ಸನ್ನಿವರ್ಗೀಸ್‌ನ ಮನೆಯಿಂದ ಬೈಕ್ ಮತ್ತು ಆಟೋರಿಕ್ಷವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಮೊಬೈಲ್ ಟವರ್‌ನ್ನು ಕೇಂದ್ರೀಕರಿಸಿ ಆರೋಪಿಯನ್ನು ಹುಡುಕಿದಾಗ ಕಾವಡಿಪ್ಪುರಂ ಹೊಳೆಯಲ್ಲಿ ಆತನ ಮೃತದೇಹ ಪತ್ತೆಯಾಯಿತು ಎಂದು ವರದಿ ತಿಳಿಸಿದೆ.