ವಂಚನೆ ಆರೋಪ; ಬಿಜೆಪಿ ಮುಖುಂಡನ ಬಂಧನ
ಕೋಲ್ಕತಾ, ಜ15: ಕೆಲಸದ ಕೊಡಿಸುವುದಾಗಿ ನಂಬಿಸಿ ಶಿಕ್ಷಕ ಪರೀಕ್ಷಾರ್ಥಿಗಳಿಂದ ಹಣ ಪಡೆದು ವಂಚಿಸಿದ ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಹಾಗೂ ವಕ್ತಾರ ಜಯ ಪ್ರಕಾಶ್ ಮಜುಂದಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 2016ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರ ಹುದ್ದೆಗೆ ನಡೆಸಲಾದ ಶಿಕ್ಷಕರ ಅರ್ಹತಾ ಪರೀಕ್ಷೆಯ ವೇಳೆ (ಟಿಇಟಿ) ಅಭ್ಯರ್ಥಿ ಅರೂಪ್ ರಾಯ್ ಅವರಿಂದ ಮಜುಂದಾರ್ 7.20 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಬಿಧಾನ್ ನಗರ ಪೊಲೀಸರಿಗೆ ದೂರು ನೀಡಲಾಗಿತ್ತು.
ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಸ್ಕೂಲ್ ಸರ್ವಿಸ್ ಕಮಿಶನ್ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ್ದ ಮಜುಂದಾರ್ 8ರಿಂದ 10ಲಕ್ಷ ರೂ. ನೀಡಿದರೆ ಶಿಕ್ಷಕ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ತಾನು ಮತ್ತು ಇನ್ನೊಬ್ಬ ಅಭ್ಯರ್ಥಿ ಒಟ್ಟು 7.20 ಲಕ್ಷ ರೂ ನೀಡಿರುವುದಾಗಿ ಅರೂಪ್ ರಾಯ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೂರು ತಿಂಗಳ ಬಳಿಕ ನಾವು ಮಜುಂದಾರ್ ಅವರನ್ನು ಭೇಟಿಯಾದಾಗ ಅವರು ತಾನು ಹಣ ಪಡೆದಿರುವುದನ್ನು ನಿರಾಕರಿಸಿದರು ಎಂದು ಅರೂಪ್ ರಾಯ್ ಆರೋಪಿಸಿದ್ದಾರೆ.