ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುವ ಯೋಧರಿಗೆ ಶಿಕ್ಷೆ: ಜನರಲ್ ರಾವತ್

Update: 2017-01-15 11:16 GMT

ಹೊಸದಿಲ್ಲಿ,ಜ.15: ತಮ್ಮ ಸೇವಾ ದುಃಸ್ಥಿತಿಗಳ ಬಗ್ಗೆ ಕೆಲವು ಯೋಧರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ವೀಡಿಯೊಗಳು ವೈರಲ್ ಆಗಿ ದೇಶಾದ್ಯಂತ ಆಕ್ರೋಶವನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಭೂ ಸೇನೆಯ ಮುಖ್ಯಸ್ಥ ಜಬಿಪಿನ್ ಜನರಲ್ ರಾವತ್ ಅವರು,ಯೋಧರು ತಮ್ಮ ದೂರುಗಳನ್ನು ಹೇಳಿಕೊಳ್ಳಲು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುವದು ದೇಶದ ಗಡಿಗಳನ್ನು ಕಾಯುತ್ತಿರುವವರ ನೈತಿಕ ಸ್ಥೈರ್ಯವನ್ನು ಉಡುಗಿಸುತ್ತದೆ,ಆದ್ದರಿಂದ ಅವರನ್ನು ಶಿಕ್ಷೆಗೊಳಪಡಿಸಬಹುದಾಗಿದೆ ಎಂದು ಇಂದಿಲ್ಲಿ ಎಚ್ಚರಿಕೆ ನೀಡಿದರು.

ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಯಾವುದೇ ಯೋಧನಿಗೆ ದೂರುಗಳಿದ್ದಲ್ಲಿ ಅದನ್ನು ಬಗೆಹರಿಸಲು ಸೂಕ್ತ ವೇದಿಕೆಯನ್ನು ಒದಗಿಸಲಾಗಿದೆ. ಅದರಿಂದ ನಿಮಗೆ ತೃಪ್ತಿಯಾಗದಿದ್ದರೆ ನೇರವಾಗಿ ನನ್ನನ್ನೇ ಸಂಪರ್ಕಿಸ ಬಹುದು ಎಂದರು.

‘‘ಆಪ್‌ನೆ ಜೋ ಕಾರವಾಯಿ ಕೀ ಹೈ ಆಪ್ ಇಸ್ ಕೆ ಲಿಯೆ ಅಪರಾಧಜನಕ್ ಹೈ, ಔರ್ ಸಜಾ ಕೆ ಹಕ್‌ದಾರ್ ಹೋ ಸಕ್ತೇ ಹೈಂ(ನಿಮ್ಮ ಕೃತ್ಯದಿಂದ ನೀವು ನಿಯಮಗಳನ್ನು ಉಲ್ಲಂಘಿಸುತ್ತಿದ್ದೀರಿ ಮತ್ತು ಇದಕ್ಕಾಗಿ ನಿಮಗೆ ಶಿಕ್ಷೆಯಾಗಬಹುದು)’’ ಎಂದು ಹೇಳಿದರು.

ಪಾಕಿಸ್ತಾನವು ನಿರಂತರವಾಗಿ ಭಾರತದ ವಿರುದ್ಧ ಛಾಯಾಯುದ್ಧದಲ್ಲಿ ತೊಡಗಿದೆಯಾದರೂ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ನಾವು ಬಯಸಿದ್ದೇವೆ ಎಂದೂ ಅವರು ತಿಳಿಸಿದರು.

ಭಯೋತ್ಪಾದನೆ ಪಿಡುಗು ಕುರಿತಂತೆ ಅವರು, ಕಳೆದ ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸ್ಥಿತಿಗೆ ಅಪಾಯ ಎದುರಾಗಿತ್ತು. ವಾಸ್ತವ ನಿಯಂತ್ರಣ ರೇಖೆಯಿರಲಿ ಅಥವಾ ನಿಯಂತ್ರಣ ರೇಖೆಯಾಗಿರಲಿ, ನಾವು ಸೂಕ್ತಕ್ರಮವನ್ನು ತೆಗೆದುಕೊಳ್ಳುತ್ತೇವೆ ಮತ್ತು ಎಲ್ಲ ಮುಂಚೂಣಿ ಪ್ರದೇಶಗಲ್ಲಿ ನಮ್ಮ ಯೋಧರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News