ನಾಲ್ಕರ ಬಾಲಕಿಯ ಮೇಲೆ ಅತ್ಯಾಚಾರ,ಹತ್ಯೆ

Update: 2017-01-15 12:19 GMT

ಥಾಣೆ,ಜ.15: ನಾಲ್ಕರ ಹರೆಯದ ಪುಟ್ಟ ಬಾಲೆಯ ಮೇಲೆ ಅತ್ಯಾಚಾರವೆಸಗಿ, ಬಳಿಕ ಆಕೆಯನ್ನು ಕೊಂದು ಶವವನ್ನು ನಾಲೆಯೊಂದರಲ್ಲಿ ಹೂತು ಹಾಕಿದ್ದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ಮನೆಯ ಬಳಿ ಆಟವಾಡುತ್ತಿದ್ದ ಮಗಳನ್ನು ಯಾರೋ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಬಾಲಕಿಯ ಹೆತ್ತವರು ಜ.9ರಂದು ನವಘರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜ.12ರಂದು ಸಂಜೆ ಥಾಣೆ ಜಿಲ್ಲೆಯ ಭಯಾಂದರ್ ಬಡಾವಣೆಯ ಆಝಾದ್ ನಗರ ಕೊಳಗೇರಿಯ ಬಳಿಯ ನಾಲೆಯಲ್ಲಿ ಹೂತು ಹಾಕಿದ್ದ ಬಾಲಕಿಯ ಶವವು ಪತ್ತೆಯಾಗಿತ್ತು. ಬೆಕ್ಕೊಂದು ನೆಲವನ್ನು ಕೆದರಿದ್ದು, ಶವದ ಕೈ ಹೊರಗೆ ಕಾಣುತ್ತಿತ್ತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು.
ಬಾಲಕಿಯ ಕುಟುಂಬಕ್ಕೆ ಪರಿಚಿತ ವ್ಯಕ್ತಿಯೇ ಈ ಕೃತ್ಯವನ್ನು ಎಸಗಿದ್ದಾನೆಂಬ ಸುಳಿವು ಪಡೆದ ಪೊಲೀಸರು 24ರ ಹರೆಯದ ಮುಖ್ಯ ಆರೋಪಿಯನ್ನು ಮತ್ತು ಅಪರಾಧವನ್ನು ಬಚ್ಚಿಡಲು ನೆರವಾಗಿದ್ದ ಆರೋಪದಲ್ಲಿ ಇತರ ಇಬ್ಬರನ್ನು ಬಂಧಿಸಿದ್ದಾರೆ.

 ತಾನು ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಕೊಂದಿದ್ದನ್ನು ಆರೋಪಿಯು ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದಾನೆ ಎಂದು ಎಸ್‌ಪಿ(ಗ್ರಾಮೀಣ)ಮಹೇಶ ಪಾಟೀಲ್ ಅವರು ಸುದ್ದಿಗಾರರಿಗೆ ತಿಳಿಸಿದರು. ಘಟನೆಯ ಬಳಿಕ ಆರೋಪಿಗಳು ಸ್ಥಳೀಯ ಹೋಟೆಲ್ಲೊಂದಕ್ಕೆ ತೆರಳಿ ಪುಷ್ಕಳ ಊಟವನ್ನು ಮಾಡಿದ್ದರು ಎಂದರು.

ನ್ಯಾಯಾಲಯವು ಬಂಧಿತರನ್ನು ಜ.24ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

 ಬಾಲಕಿಯ ಕುಟುಂಬ ಮತ್ತು ಆರೋಪಿಯ ನಡುವೆ ಯಾವುದೇ ವಿವಾದವಿರಲಿಲ್ಲ. ಆರೋಪಿ ಕಳೆದ ಕೆಲವು ತಿಂಗಳುಗಳಿಂದ ಈ ಕುಟುಂಬಕ್ಕೆ ಹತ್ತಿರವಾಗಿ ವಿಶ್ವಾಸ ಗಳಿಸಿದ್ದ ಎಂದು ಪೊಲೀಸರು ತಿಳಿಸಿದರು.

ಪ್ರಕರಣದಲ್ಲಿ ನಾಲ್ಕನೇ ಆರೋಪಿ ಮಹಾರಾಷ್ಟ್ರದಿಂದ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದ್ದು,ಆತನ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News