ದಾವೂದ್ ಇಬ್ರಾಹೀಂ ಜೊತೆ 'ಟೀ ಭೇಟಿಯಲ್ಲಿ' ಏನಾಯಿತು ?

Update: 2017-01-15 13:00 GMT

ಮುಂಬೈ: ಬಾಲಿವುಡ್‌ನ ಖ್ಯಾತ ನಟರಾಗಿರುವ ರಿಶಿ ಕಪೂರ್ ವೃತ್ತಿಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡವರು. ಅವರ ನೆನಪುಗಳ ಬುತ್ತಿ ಬಿಚ್ಚಿಡುವ ಹೊಸ ಕೃತಿ ಈಗ ಹೊರಬರುತ್ತಿರುವ ಕಾರಣದಿಂದ ಮತ್ತೆ ಈ ಬಾಲಿವುಡ್ ತಾರೆ ಸುದ್ದಿಯಲ್ಲಿದ್ದಾರೆ. ಮನೋರಂಜನಾ ಪತ್ರಕರ್ತೆ ಮೀನಾ ಅಯ್ಯರ್ ಇವರ ನೆನಪುಗಳಿಗೆ ಅಕ್ಷರರೂಪ ನೀಡಿದ್ದಾರೆ. ಹಾರ್ಪರ್ ಕೊಲಿನ್ಸ್ ಪ್ರಕಾಶನ ಹೊಣೆ ಹೊತ್ತಿದೆ. ದಾವೂದ್ ಇಬ್ರಾಹೀಂ ಅವರ ನಿವಾಸಕ್ಕೆ ಚಹಾಕೂಟಕ್ಕೆ ಹೋಗಿದ್ದಾಗಿನ ಅನುಭವವನ್ನು ಕಪೂರ್ ಇದರಲ್ಲಿ ಹಂಚಿಕೊಂಡಿದ್ದಾರೆ.

ಈ ಘಟನೆ ನಡೆದದ್ದು 1988ರಲ್ಲಿ. ಭಾರತದ ನಂಬರ್ ವನ್ ಶತ್ರುವಾಗಿ ದಾವೂದ್ ಇಬ್ರಾಹೀಂರನ್ನು ರೂಪಿಸಿದ ಮುಂಬೈ ಸ್ಫೋಟ ನಡೆದ 1993ಕ್ಕಿಂತ ಮೊದಲು ಎಂದು ಕಪೂರ್ ಸ್ಪಷ್ಟಪಡಿಸಿದ್ದಾರೆ.

ದುಬೈ ವಿಮಾನ ನಿಲ್ದಾಣದಲ್ಲಿರುವ ದಾವೂದ್ ಬಂಟನೊಬ್ಬ, ಅಲ್ಲಿಗೆ ಭೇಟಿ ನೀಡುವ ಎಲ್ಲ ಸೆಲೆಬ್ರಿಟಿಗಳ ಬಗ್ಗೆ ಡಾನ್‌ಗೆ ಮಾಹಿತಿ ನೀಡುತ್ತಾನೆ. 1988ರ ಒಂದು ದಿನ, ರಿಶಿಕಪೂರ್ ತಮ್ಮ ಸ್ನೇಹಿತ ಬಿಟ್ಟು ಆನಂದ್ ಜತೆ ಒಂದು ಸಂಗೀತ ಕಚೇರಿಗೆ ದುಬೈಗೆ ಹೋಗಿದ್ದರು. ಅವರನ್ನು ಗುರುತಿಸಿದ ದಾವೂದ್ ಬಂಟ, ತಕ್ಷಣ ದಾವೂದ್‌ಗೆ ಫೋನ್ ಸಂಪರ್ಕಿಸಿ, ಕಪೂರ್ ಕೈಗೆ ನೀಡಿದ. ನನ್ನಿಂದ ಯಾವುದೇ ಸಹಾಯ ಬೇಕಿದ್ದರೆ ತಿಳಿಸಿ ಎಂದು ಹೇಳಿದ ದಾವೂದ್, ಚಹಾ ಕೂಟಕ್ಕೆ ಆಹ್ವಾನಿಸಿದ ಎಂದು ಕಪೂರ್ ವಿವರಿಸಿದ್ದಾರೆ.

ಈ ಡಾನ್ ಭೇಟಿಯಿಂದ ಯಾವ ತೊಂದರೆಯೂ ಆಗದು ಎಂದು ನಿಶ್ಚಯಿಸಿದರು. ಏಕೆಂದರೆ ಆತ ಭೂಗತ ದೊರೆ ಎಂಬ ಕಲ್ಪನೆ ಇತ್ತೇ ವಿನಃ ಆತ ಉಗ್ರಗಾಮಿ ಎನ್ನುವ ಒಂದಂಶವೂ ಅವರಲ್ಲಿ ಇರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

"ಆ ಸಂಜೆ ನನ್ನನ್ನು ಹಾಗೂ ಬಿಟ್ಟು ಅವರನ್ನು ಹೋಟೆಲ್‌ನಿಂದ ರೋಲ್ಸ್ ರಾಯ್ಸ್ ಕಾರಿನಲ್ಲಿ ಕರೆದೊಯ್ದರು. ಸನಿಹಕ್ಕೆ ತಲುಪುತ್ತಿದ್ದಂತೆ ಸುತ್ತಿ ಬಳಸಿ ಕರೆದೊಯ್ಯಲಾಯಿತು. ಏಕೆ ಎಂದು ನನಗೆ ಅರ್ಥವಾಗಲಿಲ್ಲ. ಅದು ದಾವೂದ್ ಮನೆ ಎಲ್ಲಿದೆ ಎನ್ನುವುದು ತಿಳಿಯಬಾರದು ಎಂಬ ಕಾರಣಕ್ಕೆ ಎಂದು ಸ್ನೇಹಿತ ವಿವರಿಸಿದ. ಗಂಭೀರ ವೇಷಭೂಷಣದೊಂದಿಗೆ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ, "ನಾನು ನಿಮ್ಮನ್ನು ಚಹಾಗೆ ಆಹ್ವಾನಿಸಿದ್ದಕ್ಕೆ ಕ್ಷಮೆ ಇರಲಿ. ಏಕೆಂದರೆ ನಾನು ಮದ್ಯ ಸೇವಿಸುವುದಿಲ್ಲ" ಎಂದು ಹೇಳಿದ್ದನ್ನು ರಿಶಿ ನೆನಪಿಸಿಕೊಂಡಿದ್ದಾರೆ.

ಸುಮಾರು ನಾಲ್ಕು ಗಂಟೆಯ ಭೇಟಿಯಲ್ಲಿ ಮೂವರೂ ಜತೆಯಾಗಿ ಚಹಾ- ಬಿಸ್ಕೆಟ್ ಸೇವಿಸಿದೆವು. ದಾವೂದ್ ತಾನೆಸಗಿದ ಅಪರಾಧ ಕೃತ್ಯಗಳೂ ಸೇರಿದಂತೆ ಹಲವು ವಿಚಾರವಾಗಿ ಮುಕ್ತವಾಗಿ ಮಾತನಾಡಿದರು. ಆ ಬಗ್ಗೆ ತಮಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದೂ ಸ್ಪಷ್ಟಪಡಿಸಿದರು.

"ಸಣ್ಣ ಕಳ್ಳತನ ಮಾಡಿದ್ದೆ. ಆದರೆ ಕೆಲವರನ್ನು ಕೊಲ್ಲಿಸಿದ್ದರೂ ನಾನು ಯಾರನ್ನೂ ಕೊಂದಿಲ್ಲ. ಮುಂಬೈ ಕೋರ್ಟ್‌ನಲ್ಲಿ ಸುಳ್ಳುಹೇಳಿದ್ದಕ್ಕಾಗಿ ವ್ಯಕ್ತಿಯೊಬ್ಬರನ್ನು ಕೊಲ್ಲಿಸಿದ್ದನ್ನು ನೆನಪಿಸಿಕೊಂಡರು"

ತವಾಯಿಫ್ ಚಿತ್ರದ ದಾವೂದ್ ಪಾತ್ರದಲ್ಲಿ ಮಿಂಚಿದ ರಿಶಿಯನ್ನು ದಾವೂದ್ ಮುಕ್ತಕಂಠದಿಂದ ಹೊಗಳಿದರು. ಈ ಚಿತ್ರ ತಮ್ಮನ್ನು ವೈಭವೀಕರಿಸಿದೆ ಎಂದು ದಾವೂದ್ ಹೇಳಿದರು. ಹೀಗೆ ಒಂದು ಬಾರಿ ಮಾತ್ರ ದಾವೂದ್‌ನನ್ನು ಭೇಟಿಯಾದದ್ದಲ್ಲ ಎಂದು ಹೇಳಿದ್ದಾರೆ.

ಕೆಲ ವರ್ಷ ಬಳಿಕ ದುಬೈನ ಮಾಲ್ ಒಂದರಲ್ಲಿ ದಾವೂದ್ ಭೇಟಿಯಾದರು. 10 ಮಂದಿ ಅಂಗರಕ್ಷಕರು ಜತೆಗಿದ್ದರು. ಆ ಅಂಗಡಿಯಲ್ಲಿ ಏನು ಬೇಕೋ ಅದನ್ನು ತೆಗೆದುಕೊಳ್ಳಿ ಎಂದು ದಾವೂದ್ ಹೇಳಿದ್ದರು. ಇದಕ್ಕೆ ಕೃತಜ್ಞತೆ ಹೇಳಿ, ನಾನು ನನ್ನ ಸ್ವಂತ ಹಣದಲ್ಲೇ ಶಾಪಿಂಗ್ ಮಾಡುತ್ತೇನೆ ಎಂದು ಹೇಳಿದೆ.

ದಾವೂದ್ ಈ ನಟನಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನೂ ಕೊಟ್ಟಿದರು. ಆದರೆ 1989ರ ವೇಳೆಗೆ ಭಾರತದಲ್ಲಿ ಇನ್ನೂ ಮೊಬೈಲ್ ಇಲ್ಲದ ಕಾರಣ ಅವರಿಗೆ ನನ್ನ ಸಂಖ್ಯೆ ಕೊಡಲಾಗಲಿಲ್ಲ ಎಂದು ರಿಶಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News