ಯೋಧನ ಉಪವಾಸ ಮುಷ್ಕರಕ್ಕೆ ಪತ್ನಿಯ ಸಾಥ್
ಭೋಪಾಲ,ಜ.15: ಕೆಳದರ್ಜೆಗಳ ಹುದ್ದೆಗಳಲ್ಲಿನ ಸೇವಾ ದುಃಸ್ಥಿತಿಯತ್ತ ಗಮನ ಸೆಳೆಯಲು ತನ್ನ ಪತಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಮುಷ್ಕರ ನಡೆಸುತ್ತಿದ್ದಾರೆ ಮತ್ತು ಅವರ ಬೆಂಬಲಾರ್ಥ ತಾನೂ ನಾಲ್ಕು ದಿನಗಳಿಂದ ನಿರಶನವನ್ನು ಕೈಗೊಂಡಿದ್ದೇನೆ ಎಂದು ಸೇನೆಯ ಲಾನ್ಸ್‌ನಾಯಕ ಯಜ್ಞಪ್ರತಾಪ್ ಸಿಂಗ್ ಅವರ ಪತ್ನಿ ರಿಚಾ ಸಿಂಗ್ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸೇವಾ ದುಃಸ್ಥಿತಿಗಳ ಕುರಿತು ಸಿಂಗ್ ಫೇಸಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೋ ವೈರಲ್ ಅಗಿತ್ತು.
ತನ್ನ ಪತಿಯಿಂದ ಮೇಲಧಿಕಾರಿಗಳ ಕಾರುಗಳನ್ನು ತೊಳೆಯುವ, ಅವರ ಶೂಗಳಿಗೆ ಪಾಲಿಷ್ ಹಾಕುವಂತಹ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂದು ಇಲ್ಲಿಂದ 500 ಕೀ.ಮೀ.ದೂರದಲ್ಲಿರುವ ತನ್ನ ತವರೂರು ರೇವಾದಿಂದ ದೂರವಾಣಿಯಲ್ಲಿ ಮಾತನಾಡುತ್ತಿದ್ದ ರಿಚಾ ಆರೋಪಿಸಿದರು.
ಡೆಹರಾಡೂನ್‌ನಲ್ಲಿ ಸೇವೆಯಲ್ಲಿದ್ದ 14 ರಾಜಪುತಾನಾ ರೈಫಲ್ಸ್‌ಗೆ ಸೇರಿದ ಸಿಂಗ್ ಅವರನ್ನು ಅವರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಎತ್ತಂಗಡಿ ಮಾಡಲಾಗಿದ್ದು, ಡಿ.21ರಿಂದ ಫತೇಗಡ(ಉ.ಪ್ರ)ದಲ್ಲಿ ಕರ್ತವ್ಯಕ್ಕೆ ಹಾಜರಾಗಿ ದ್ದಾರೆ. ತನ್ನ ಪತಿಯನ್ನು ‘ಸಹಾಯಕ ’ನ ಕರ್ತವ್ಯಗಳಿಂದ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ ರಿಚಾ, ಸಿಪಾಯಿ,ಹವಿಲ್ದಾರ್ ಮತ್ತು ಲಾನ್ಸ್‌ನಾಯಕ್ ಹುದ್ದೆಗಳಲ್ಲಿ ರುವವರನ್ನು ಅಧಿಕಾರಿಗಳ ಸೇವೆಗಾಗಿ ಬಳಸಿಕೊಳ್ಳಲಾಗುತ್ತದೆ ಎಂದರು.
ತನ್ನ ಪತಿ ದೇಶಸೇವೆಗಾಗಿ ಸೇನೆಯನ್ನು ಸೇರಿದ್ದಾರೆಯೇ ಹೊರತು ಅಧಿಕಾರಿಗಳ ಮನೆಗಳಲ್ಲಿ ಚಾಕರಿ ಮಾಡಲಲ್ಲ ಎಂದ ಅವರು, ಉಪವಾಸವಿರುವ ತನ್ನ ಪತಿಯ ದೇಹಸ್ಥಿತಿ ಹದಗೆಡುತ್ತಿದೆಯಾದರೂ ಅವರಿಗೆ ವೈದ್ಯಕೀಯ ನೆರವನ್ನು ಒದಗಿಸಲಾಗಿಲ್ಲ ಎಂದು ದೂರಿದರು.