×
Ad

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ಆರೆಸ್ಸೆಸ್‌ಗೆ ದೇಶ ಬಿಡಲು ಹೇಳುವ ಹಕ್ಕಿಲ್ಲ: ಪಿಣರಾಯಿ

Update: 2017-01-17 15:56 IST

ತಿರುವನಂತಪುರಂ,ಜ.17: ತಮಗೆ ಸಮ್ಮತವಲ್ಲದ ಅಭಿಪ್ರಾಯ ಹೇಳುವವರನ್ನು ದೇಶ ತೊರೆಯಲು ಹೇಳುವ ಹಕ್ಕು ಆರೆಸ್ಸೆಗಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆರೆಸ್ಸೆಸ್ ವಿರುದ್ಧ ತನ್ನ ಈ ಹೇಳಿಕೆಯನ್ನು ಪಿಣರಾಯಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಖಾದಿ ಮಂಡಳಿ ಕ್ಯಾಲೆಂಡರ್‌ನಿಂದ ಗಾಂಧಿ ಚಿತ್ರ ಬದಲಿಸಿ ಮೋದಿ ಚಿತ್ರ ಹಾಕಿದ್ದು ಅಲ್ಪತನವೆಂದು ಅವರು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಫೇಸ್‌ಬುಕ್ ಫೋಸ್ಟ್ ಹೀಗಿದೆ:

ತಮಗೆ ಇಷ್ಟವಿಲ್ಲದ ಅಭಿಪ್ರಾಯ ಹೇಳುವವರನ್ನು ದೇಶ ತೊರೆಯಿರಿ ಎನ್ನಲು ಆರೆಸ್ಸೆಸ್‌ಗೆ ಯಾವ ಹಕ್ಕಿದೆ. ಇಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಅದನ್ನು ಅರ್ಥಮಾಡಿಕೊಳ್ಳದ ಆರೆಸ್ಸೆಸ್ ಪ್ರಚೋದನಾತ್ಮಕವಾಗಿ ಮಾತಾಡುತ್ತಿದೆ.. ಆರೆಸ್ಸೆಸ್ ಪ್ರಚಾರಕ್ ಆಗಿದ್ದ ನರೇಂದ್ರಮೋದಿ ಪ್ರಧಾನಿ ಸ್ಥಾನದಲ್ಲಿ ಕೂತು ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನೇ ನಿರಂತರ ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಕೇರಳದಲ್ಲಿಯೂ ಆರೆಸ್ಸೆಸ್ ಕುಣಿದು ಕುಪ್ಪಳಿಸುತ್ತಿದೆ.

ಆದರೆ,ಬಿಜೆಪಿಯ ಸಿ.ಕೆ. ಪದ್ಮನಾಭನ್‌ರಂತಹವರ ಅಭಿಪ್ರಾಯವನ್ನು ನಾವು ಪರಿಗಣಿಸಬೇಕಿದೆ. ಬಿಜೆಪಿಯಲ್ಲಿಯೂ ನೇರ ಉತ್ತಮ ಚಿಂತನೆಯ ಜನರಿದ್ದಾರೆಂದು ಅವರಿಂದ ತಿಳಿಯುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ಆರೆಸ್ಸೆಸ್ ನವರು ಈಗ ಗಾಂಧೀಜಿ ಚಿತ್ರವನ್ನು ಕೂಡಾ ಬಿಟ್ಟಿಲ್ಲ. ಒಬ್ಬ ಪ್ರಧಾನಿ ಇಷ್ಟು ಕೆಳಮಟ್ಟಕ್ಕಿಳಿಯಬಾರದು. ಚರಕದೊಂದಿಗಿನ ಗಾಂಧಿ ಚಿತ್ರ ಜನರ ಹೃದಯದಲ್ಲಿ ನೆಲೆಯೂರಿದೆ. ಈ ಚಿತ್ರವನ್ನು ಬದಲಿಸಿ ಮೋದಿಯ ಚಿತ್ರವನ್ನು ಪ್ರತಿಷ್ಠಾಪಿಸಿರುವುದು ಅಲ್ಪತನದ ಪರಮಾವಧಿಯೆನ್ನದೆ ವಿಧಿಯಿಲ್ಲ. ಜಾತ್ಯತೀತತೆಯ ಧ್ವಂಸಕ್ಕೆ ಪ್ರಯತ್ನಿಸುವ ಆರೆಸ್ಸೆಸ್‌ನ ಕ್ರಮಗಳಿಗೆ ಕೇಂದ್ರ ಸರಕಾರ ಸಹಾಯ ಮಾಡುತ್ತಿದೆ. ಇದನ್ನು ಮಾನವೀಯತೆ ಮತ್ತು ಜಾತ್ಯತೀತತೆಯಲ್ಲಿ ನಂಬುಗೆ ಇರುವ ಎಲ್ಲರೂ ವಿರೋಧಿಸಬೇಕು ಎಂದು ಪಿಣರಾಯಿ ವಿಜಯನ್ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News