1974ರಲ್ಲಿ 30 ಸಾವಿರ ರೂ.ಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದೆ ಎಂದ ರಿಷಿ ಕಪೂರ್.ಹಾಗಾದರೆ ಈಗ ಎಷ್ಟು ಅದರ ರೇಟು ?

Update: 2017-01-18 10:52 GMT

1973ರ ತನ್ನ ‘ಬಾಬಿ’ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಾನು ಖರೀದಿಸಿದ್ದೆ ಎಂದು ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ ಅವರು ಕಳೆದ ವರ್ಷ ‘ದಿ ಕ್ವಿಂಟ್’ಗೆ ನೀಡಿದ್ದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು.

ಇಂಡಿಯಾ ಟುಡೇ ಟಿವಿಗೆ ನೀಡಿರುವ ಇತ್ತೀಚಿನ ಸಂದರ್ಶನದಲ್ಲಿ ಆ ಪ್ರಶಸ್ತಿಯನ್ನು ಪಡೆಯಲು ತಾನು 30,000 ರೂ.ಗಳನ್ನು ನೀಡಿದ್ದೆ ಎನ್ನುವುದನ್ನು ಅವರು ಬಹಿರಂಗಗೊಳಿಸಿದ್ದಾರೆ.

1973ರಲ್ಲಿ ‘ಬಾಬಿ ’ ಚಿತ್ರದ ನಾಯಕ ನಟನಾಗಿ ಬಾಲಿವುಡ್ ಪ್ರವೇಶಿಸಿದ್ದ ರಿಷಿ ಕಪೂರ್ 1974ರಲ್ಲಿ ಫಿಲ್ಮ್‌ಫೇರ್‌ನ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದರು.

ಫಿಲ್ಮ್‌ಫೇರ್‌ನ ಅತ್ಯುತ್ತಮ ನಟ ಪ್ರಶಸ್ತಿ ಈಗಲೂ ಮಾರಾಟವಾಗುತ್ತಿದೆಯಾದರೆ ಅಂದು ರಿಷಿ ಕಪೂರ್ 30,000ರೂ.ಗಳನ್ನು ನೀಡಿದ್ದ ಲೆಕ್ಕಾಚಾರದಂತೆ ಈ ಪ್ರಶಸ್ತಿಯ ಈಗಿನ ಬೆಲೆ ಸುಮಾರು 6.19 ಲಕ್ಷ ರೂ.ಗಳಾಗುತ್ತವೆ.

ಹಣದುಬ್ಬರವನ್ನು ಹೊಂದಿಸಿಕೊಂಡು ಈ ಹೊಸಬೆಲೆಯನ್ನು ಬಳಕೆದಾರ ಬೆಲೆ ಸೂಚಿ(ಸಿಪಿಐ)ಯನ್ನು ಬಳಸಿಕೊಂಡು ಲೆಕ್ಕ ಹಾಕಲಾಗಿದೆ. ಭಾರತೀಯ ರಿಜರ್ವ್ ಬ್ಯಾಂಕು ಹಣದುಬ್ಬರವನ್ನು ನಿರ್ಧರಿಸಲು ಈ ಸಿಪಿಐ ಅನ್ನು ಬಳಸಿಕೊಳ್ಳುತ್ತದೆ.

 ಫಿಲ್ಮ್‌ಫೇರ್ ಅಥವಾ ಇತರ ಯಾವುದೇ ಚಲನಚಿತ್ರ ಪ್ರಶಸ್ತಿಗಳನ್ನು ಹಣವನ್ನು ನೀಡಿ ಪಡೆದುಕೊಳ್ಳಬಹುದಾಗಿದೆ ಎನ್ನುವುದು ಮೊದಲಿನಿಂದಲೂ ಕೇಳಿಬರುತ್ತಿರುವ ಆರೋಪ. 74ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮನೋಜ್ ಬಾಜಪೇಯಿ(ಅಲಿಗಡ) ಮತ್ತು ಅಕ್ಷಯ್ ಕುಮಾರ್(ಏರ್‌ಲಿಫ್ಟ್) ಅವರನ್ನು ನಾಮಕರಣಗೊಳಿಸದ ಹಿನ್ನೆಲೆಯಲ್ಲಿ ಈ ವಿವಾದ ಈ ವರ್ಷ ಮತ್ತೊಮ್ಮೆ ಕೇಳಿಬಂದಿದೆ.

ಪ್ರಶಸ್ತಿ ಸಮಿತಿಯನ್ನು ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡ ಟ್ವಿಟರಿಗರು, ಹಣ ನೀಡದ್ದರಿಂದ ಅರ್ಹ ನಟರು ಪ್ರಶಸ್ತಿಗೆ ನಾಮಕರಣದಿಂದ ವಂಚಿತಗೊಂಡಿದ್ದಾರೆ ಎಂದು ಝಾಡಿಸಿದ್ದಾರೆ. ಅತ್ಯುತ್ತಮ ಸಂಗೀತ ನಿದೇಶಕ ಪ್ರಶಸ್ತಿಗೆ ಸ್ವತಃ ನಾಮಕರಣಗೊಂಡಿದ್ದರೂ ಯುವ ಸಂಗೀತ ಸಂಯೋಜಕ ಅಮಾಲ್ ಮಲಿಕ್ ಅವರೂ ಅರ್ಹರನ್ನು ಪ್ರಶಸ್ತಿಗೆ ಪರಿಗಣಿಸದ್ದನ್ನು ಕಟುವಾಗಿ ಟೀಕಿಸಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

 ಕಲ್ಪನೆಗಳು ಎಂದೂ ಸತ್ಯಗಳಲ್ಲ ಮತ್ತು ವದಂತಿಗಳು ಸುದ್ದಿಗಳಲ್ಲ. ಆದರೆ ಇಂದು ಯಾವುದೇ ನಟ/ನಟಿ ಸರಿಯಾದ ವ್ಯಕ್ತಿಗಳಿಗೆ ಆರು ಲಕ್ಷ ರೂ.ಗೂ ಹೆಚ್ಚಿನ ಹಣ ಪಾವತಿ ಮಾಡಿದರೆ ಆತ/ಆಕೆ ಹಿಂದಿ ಸಿನಿಮಾರಂಗಕ್ಕೆ ತನ್ನ ‘ಕೊಡುಗೆ ’ ಗಾಗಿ ಪ್ರಶಸ್ತಿಯನ್ನು ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News