×
Ad

ಹೊಟೇಲ್ ಮಾಲಕನಿಂದ 3.25 ಲಕ್ಷ ರೂ. ವಂಚಿಸಿ ಇನ್ನೊವಾ ಕಾರಿನೊಂದಿಗೆ ಯುವಕ ಪರಾರಿ

Update: 2017-01-18 18:25 IST

ಕಾಸರಗೋಡು, ಜ,18: ಪಾಲುದಾರಿಕೆಯಲ್ಲಿ ಮಂಗಳೂರಿನಲ್ಲಿ ಕಾಫಿಶಾಪ್ ತೆರೆಯೋಣ ಎಂದು ಹೊಟೇಲ್ ಮಾಲಕನಿಗೆ3.25 ಲಕ್ಷ ರೂಪಾಯಿ ವಂಚಿಸಿ ಇನ್ನೊವಾ ಕಾರಿನೊಂದಿಗೆ ಯುವಕ ಪರಾರಿಯಾಗಿದ್ದಾನೆಂದು ಕಾಸರಗೋಡು ನಗರ ಠಾಣೆಯಲ್ಲಿ ಹೊಟೇಲ್ ಮಾಲಕ ದೂರು ನೀಡಿದ್ದಾರೆ.

ಕಾಸರಗೋಡು ಹಳೆ ಬಸ್‌ಸ್ಟಾಂಡ್ ಎಮರಾಲ್ಡ್ ಹೊಟೇಲ್ ಮಾಲಕ ಆಲಂಪಾಡಿ ಬರ್ಕತ್ ಹೌಸ್‌ನ ಅಬೂಬಕರ್ ಅಲಿಯ ಪುತ್ರ ಎಸ್.ಎ.ಹಮೀದ್ ನೈಮರ್ ಮೂಲೆಯ ಶೈಷಾದ್ ಎಂಬವನಿಂದ ವಂಚನೆಗೊಳಗಾದ ವ್ಯಕ್ತಿ. ಕಾಸರಗೋಡು ನಗರ ಪೊಲೀಸರು ಶೈಷಾದ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಹೊಟೇಲಿನಲ್ಲಿ ರೂಮ್ ಪಡೆದು ವಾಸಿಸಿದ್ದ ಶೈಷಾದ್‌ನಿಂದ 89,000ರೂಪಾಯಿ ತನಗೆ ಬಾಡಿಗೆ ಕೂಡಾ ಬರಬೇಕಾಗಿದೆ ಎಂದು ಎಸ್.ಎ. ಹಮೀದ್ ಅಲಿ ದೂರಿನಲ್ಲಿ ವಿವರಿಸಿದ್ದಾರೆ. ಹಮೀದ್ ಅಲಿಯ ಪರಿಚಯಿಸಿಕೊಂಡ ಶೈಷಾದ್ ಮಂಗಳೂರಿನಲ್ಲಿ ಕಾಫಿಶಾಪ್ ತೆರೆದರೆ ಲಾಭವಿದೆ ಎಂದು ಹೇಳಿ ವಂಚಿಸಿದ್ದಾನೆ.

ಹೊಟೇಲ್‌ನಲ್ಲಿ ಕೋಣೆ ಪಡೆದು ಶೈಷಾದ್ ಹಮೀದ್ ಅಲಿಯನ್ನು ಪರಿಚಯಿಸಿಕೊಂಡಿದ್ದ. ನಂತರ ಹಂತ ಹಂತವಾಗಿ 3.25 ಲಕ್ಷ ಹಣ ಪಡೆದಿದ್ದ. ಜನವರಿ 15ಕ್ಕೆ ತನಗೆ ಬೇರೆಡೆಗೆ ಹೋಗಲಿಕ್ಕಿದೆ ಕಾರು ಬೇಕಿತ್ತು ಎಂದು ಹಮೀದ್ ಅಲಿಯ ಕೆಎಲ್ 14 ಎಸ್ 5523 ನಂಬರಿನ ಇನ್ನೋವಾ ಕಾರನ್ನು ಪಡೆದು ಕೊಂಡು ಹೋದಾತ ಮರಳಿಲ್ಲ ಎಂದು ಹಮೀದ್ ಅಲಿ ಹೇಳಿದ್ದಾರೆ.

ಯುವಕನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರು ನೀಡಿದ ಮೇಲೆಯೂ ಪೊಲೀಸರು ಯುವಕ ಮರಳಿ ಬರಬಹುದೆಂದು ತನಿಖೆಯನ್ನು ಕೆಲವು ದಿವಸ ಮುಂದೂಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News