×
Ad

ನೋಟು ಅಮಾನ್ಯ ಪ್ರಕ್ರಿಯೆಗೆ ಕಳೆದ ಜನವರಿಯಲ್ಲೇ ಚಾಲನೆ ದೊರೆತಿತ್ತು: ಪಟೇಲ್

Update: 2017-01-18 20:22 IST

ಹೊಸದಿಲ್ಲಿ, ಜ.18: ಅಧಿಕ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ಪ್ರಕ್ರಿಯೆಗೆ ಕಳೆದ ವರ್ಷದ ಜನವರಿಯಲ್ಲೇ ಚಾಲನೆ ದೊರೆತಿತ್ತು ಎಂದು ರಿಸರ್ವ್ ಬ್ಯಾಂಕ್ ಗನರ್ವರ್ ಊರ್ಜಿತ್ ಪಟೇಲ್ ತಿಳಿಸಿದ್ದಾರೆ.

ಅವರಿಂದು ನೋಟು ಅಮಾನ್ಯ ಕ್ರಮದ ಪರಿಣಾಮದ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿ ಎದುರು ಹಾಜರಾಗಿ ಹೇಳಿಕೆ ನೀಡಿದರು. 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವಂತೆ ಸರಕಾರ ನವೆಂಬರ್ 7ರಂದು 'ಸಲಹೆ' ನೀಡಿತ್ತು ಎಂದು ಅವರು ಹೇಳಿಕೆ ನೀಡಿದ್ದಾರೆ. ಆದರೆ ನೋಟು ಅಮಾನ್ಯಗೊಳಿಸಿದ ಬಳಿಕ ಹಳಿ ತಪ್ಪಿರುವ ಬ್ಯಾಂಕಿಂಗ್ ವ್ಯವಹಾರ ಯಾವಾಗ ಸುಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂಬುದರ ಬಗ್ಗೆ ಚಕಾರ ಎತ್ತದ ಪಟೇಲ್, ಆರ್‌ಬಿಐ ಸಂದರ್ಭಕ್ಕೆ ತಕ್ಕಷ್ಟು ಹಣವನ್ನು ಒದಗಿಸಲಿದೆ ಎಂದು ತಿಳಿಸಿದರು.

ಕಳೆದ ನವೆಂಬರ್‌ನಲ್ಲಿ ನೋಟು ಅಮಾನ್ಯಗೊಳಿಸಿದ ಬಳಿಕ ಪರಿಸ್ಥಿತಿ ಸುಧಾರಿಸಲು 9.2 ಲಕ್ಷ ಕೋಟಿಯಷ್ಟು ಮೊತ್ತದ ಹಣವನ್ನು ಹೊಸ ಕರೆನ್ಸಿ ನೋಟುಗಳ ಮುಖೇನ ಚಲಾವಣೆಗೆ ತರಲಾಗಿದೆ . ಅಘೋಷಿತ ಹಣವನ್ನು ಪತ್ತೆಹಚ್ಚುವುದು ಮತ್ತು ಉಗ್ರಗಾಮಿಗಳಿಗೆ ನಕಲಿ ನೋಟುಗಳ ಮೂಲಕ ಹಣ ಪೂರೈಸುವುದನ್ನು ತಡೆಗಟ್ಟುವುದು ನೋಟು ಅಮಾನ್ಯದ ಮುಖ್ಯ ಉದ್ದೇಶವಾಗಿದೆ ಎಂದು ಪಟೇಲ್ ಸಮಿತಿಗೆ ತಿಳಿಸಿದರು. ಆದರೆ ಅಮಾನ್ಯಗೊಳಿಸಲಾದ 15.44 ಲಕ್ಷ ಕೋಟಿ ಮೊತ್ತದಲ್ಲಿ ಎಷ್ಟು ಹಣ ವಾಪಾಸು ಬಂದಿದೆ ಎಂಬ ವಿವರವನ್ನು ಆರ್‌ಬಿಐ ಇದುವರೆಗೆ ನೀಡಿಲ್ಲ. ಕೆಲವು ಮಾಹಿತಿ ಪ್ರಕಾರ ಶೇ.97ರಷ್ಟು ಹಣ ವಾಪಾಸು ಬಂದಿದೆ. ಆದರೆ ಇದನ್ನು ಇನ್ನೂ ಆರ್‌ಬಿಐ ಅಧಿಕೃತವಾಗಿ ತಿಳಿಸಿಲ್ಲ.

ಇದೇ ವೇಳೆ ಸಮಿತಿ ಎದುರು ಹಾಜರಾಗಿದ್ದ ವಿತ್ತ ಸಚಿವಾಲಯದ ಅಧಿಕಾರಿಗಳು , ನವೆಂಬರ್ 8ರ ಬಳಿಕ ಎಷ್ಟು ಮೊತ್ತ ಹಳೆಯ ನೋಟುಗಳ ಮುಖೇನ ಬ್ಯಾಂಕ್‌ನಲ್ಲಿ ಜಮೆ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ. ಊರ್ಜಿತ್ ಪಟೇಲ್ ಅವರು ಶುಕ್ರವಾರ ಕಾಂಗ್ರೆಸ್‌ನ ಕೆ.ವಿ.ಥೋಮಸ್ ನೇತೃತ್ವದ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಎದುರು ಹಾಜರಾಗಿ ಹೇಳಿಕೆ ನೀಡಲಿದ್ದಾರೆ. ಅಗತ್ಯಬಿದ್ದರೆ ಪ್ರಧಾನಿ ನರೇಂದ್ರ ಮೋದಿಯನ್ನು ಕೂಡಾ ಸಮಿತಿಯ ಎದುರು ಕರೆಸಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿ ಕೆ.ವಿ.ಥೋಮಸ್ ಅವರು ವಿವಾದಕ್ಕೆ ಕಾರಣರಾಗಿದ್ದರು .ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ನೇತೃತ್ವದ ಸಮಿತಿಯ ಸಭೆಯಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘಟನೆ, ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಪ್ರತಿನಿಧಿಗಳು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News