ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಘೋಷಣೆಗೆ ಕೇಂದ್ರ ದಿಂದ ಹೊಸ ಷರತ್ತು
ಹೊಸದಿಲ್ಲಿ,ಜ.18: ನೂತನ ತೆರಿಗೆ ವಂಚನೆ ಕ್ಷಮಾದಾನ ಯೋಜನೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಘೋಷಣೆಗೆ ಮಿತಿಯನ್ನು ಹೇರಿರುವ ಸರಕಾರವು ಅದರ ಮೂಲಕ ದೇಶದಲ್ಲಿಯ ಕಪ್ಪುಹಣವನ್ನು ಮಾತ್ರ ಘೋಷಿಸಬಹುದೇ ಹೊರತು ಚಿನ್ನಾಭರಣಗಳು,ಶೇರುಗಳು,ಸ್ಥಿರಾಸ್ತಿ ಅಥವಾ ವಿದೇಶಿ ಬ್ಯಾಂಕ್ ಖಾತೆಗಳನ್ನಲ್ಲ ಎಂದು ಇಂದು ಹೇಳಿತು.
ಪಿಎಂಜಿಕೆವೈ ಯೋಜನೆಯಡಿ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಠೇವಣಿ ಮಾಡಲಾಗಿರುವ ಕಪ್ಪುಹಣವನ್ನು ಶೇ.50ರಷ್ಟು ತೆರಿಗೆ ಮತ್ತು ಮೇಲ್ತೆರಿಗೆಗಳನ್ನು ಸಂದಾಯ ಮಾಡುವ ಮೂಲಕ ಘೋಷಿಸಬಹುದಾಗಿದೆ. ಜೊತೆಗೆ ಒಟ್ಟು ಮೊತ್ತದ ಶೇ.25ರಷ್ಟನ್ನು ನಾಲ್ಕು ವರ್ಷಗಳ ಅವಧಿಗೆ ಠೇವಣಿಯಿರಿಸಬೇಕಾಗಿದ್ದು, ಇದಕ್ಕೆ ಬಡ್ಡಿ ದೊರೆಯುವುದಿಲ್ಲ.
ಯಾವುದೇ ವ್ಯಕ್ತಿಯ ವಿರುದ್ಧ ಶೋಧ/ಸರ್ವೆ ಕಾರ್ಯಾಚರಣೆ ಆರಂಭಗೊಂಡಿದ್ದಿದ್ದರೆ ಅಂತಹ ವ್ಯಕ್ತಿ ಈ ಯೋಜನೆಯಡಿ ತನ್ನ ಅಘೋಷಿತ ಆದಾಯವನ್ನು ಘೋಷಿಸಲು ಅರ್ಹನಾಗಿರುತ್ತಾನೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಹೊರಡಿಸಿರುವ ಸ್ಪಷ್ಟನೆಗಳಲ್ಲಿ ತಿಳಿಸಲಾಗಿದೆ.