ಕೇರಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ, ಆರೆಸ್ಸೆಸ್ ಕಚೇರಿಗೆ ಬಾಂಬ್ ಎಸೆತ
ತಲಶ್ಶೇರಿ,ಜ.19: ರಾಜಕೀಯವಾಗಿ ಸೂಕ್ಷ್ಮವಾಗಿರುವ ಕಣ್ಣೂರು ಜಿಲ್ಲೆಯ ಧರ್ಮಾದಮ್‌ನ ಅಂದಲೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಸಂತೋಷ್ ಎನ್ನುವವರನ್ನು ಸಿಪಿಎಂ ಕಾರ್ಯಕರ್ತರೆನ್ನಲಾಗಿರುವ ದುಷ್ಕರ್ಮಿಗಳ ಗುಂಪೊಂದು ಕಳೆದ ರಾತ್ರಿ ಹತ್ಯೆಗೈದಿದೆ.
ಅಂದಲೂರು ಬಿಜೆಪಿ ಬೂತ್ ಅಧ್ಯಕ್ಷ ಸಂತೋಷ ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬುಧವಾರ ತಡರಾತ್ರಿ ಅವರು ತನ್ನ ಮನೆಯಲ್ಲಿ ಒಬ್ಬರೇ ಇದ್ದಾಗ ಅಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಚೂರಿಗಳಿಂದ ಇರಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಅಸು ನೀಗಿದರು.
ಘಟನೆಯ ಬಳಿಕ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದ್ದು, ಕಣ್ಣೂರಿನಲ್ಲಿ ಬಿಜೆಪಿ ಹರತಾಳಕ್ಕೆ ಕರೆ ನೀಡಿತ್ತು. ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ವಾಹನಗಳು ರಸ್ತೆಗಿಳಿದಿರಲಿಲ್ಲ.
ಬಾಂಬ್ ಎಸೆತ
ತಳಿಪರಂಬದಲ್ಲಿ ಇಂದು ಬೆಳಿಗ್ಗೆ ಆರೆಸ್ಸೆಸ್ ಕಾರ್ಯಾಲಯದ ಮೇಲೆ ನಾಡಬಾಂಬೊಂದನ್ನು ಎಸೆಯಲಾಗಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.