ಹತ್ತು ಲಕ್ಷ ಮಿಕ್ಕಿದ ಠೇವಣಿ ಇರುವ ಖಾತೆಗಳ ಮಾಹಿತಿ ನೀಡಲು ಸೂಚನೆ
ಹೊಸದಿಲ್ಲಿ, ಜ.19: ಯಾವುದೇ ಬ್ಯಾಂಕ್ ಖಾತೆಯಲ್ಲಿ ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಜಮೆಯಾಗಿದ್ದರೆ ಅಂತಹ ಬ್ಯಾಂಕ್ ಖಾತೆಗಳ ಬಗ್ಗೆ ವಿವರವನ್ನು ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಯು ಬ್ಯಾಂಕ್‌ಗಳಿಗೆ ಸೂಚಿಸಿದೆ.
ತನಗೆ ಮಾಹಿತಿ ನೀಡಬೇಕಾದ ನಗದು ವ್ಯವಹಾರಗಳ ಪಟ್ಟಿಯನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ) ಜನವರಿ 17ರಂದು ಬ್ಯಾಂಕ್‌ಗಳಿಗೆ ಕಳಿಸಿರುವ ಅಧಿಸೂಚನೆಯಲ್ಲಿ ವಿವರಿಸಿದೆ.ಜೊತೆಗೆ ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ಕಳುಹಿಸುವ ವಿವರವನ್ನೂ ನೀಡಿದೆ. 2016ರ ನವೆಂಬರ್ 9ರಿಂದ ಡಿ.30ರವರೆಗೆ ವ್ಯಕ್ತಿಯೋರ್ವನ ಒಂದು ಅಥವಾ ಹೆಚ್ಚಿನ ಚಾಲ್ತಿ ಖಾತೆ(ಕರೆಂಟ್ ಅಕೌಂಟ್)ಯಲ್ಲಿ ಒಟ್ಟಾರೆ 12.50 ಲಕ್ಷ ರೂ. ಅಥವಾ ಹೆಚ್ಚಿನ ಹಣ ಠೇವಣಿಯಿದ್ದರೆ ಮತ್ತು ಕರೆಂಟ್ ಅಕೌಂಟ್ ಹೊರತಪಡಿಸಿ, ಇತರ ಖಾತೆಗಳಲ್ಲಿ 2.5 ಲಕ್ಷ ರೂ. ಅಥವಾ ಹೆಚ್ಚಿನ ಹಣ ಠೇವಣಿಯಿದ್ದರೆ ಅಂತಹ ಬ್ಯಾಂಕ್ ಖಾತೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಬ್ಯಾಂಕ್‌ಗಳು ಮಾಹಿತಿ ನೀಡಬೇಕಿದೆ. ಅಲ್ಲದೆ 2016ರ ಎಪ್ರಿಲ್ 1ರಿಂದ ನವೆಂಬರ್ 9ರವರೆಗಿನ ಅವಧಿಯಲ್ಲಿ ಯಾವುದೇ ಖಾತೆಯಲ್ಲಿ ಮಾಡಿರುವ ನಗದು ಠೇವಣಿಯ ಬಗ್ಗೆ ಬ್ಯಾಂಕ್‌ಗಳು ಜನವರಿ 31ರ ಒಳಗೆ ಮಾಹಿತಿ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆದಾಯತೆರಿಗೆ ಇಲಾಖೆಯ ಸೂಚನೆಯ ವಿವರ ಹೀಗಿದೆ:
► ವ್ಯಕ್ತಿಯೋರ್ವನ (ಚಾಲ್ತಿ ಖಾತೆ ಮತ್ತು ಆವಧಿಕ ಠೇವಣಿ ಹೊರತಪಡಿಸಿ) ಒಂದು ಅಥವಾ ಹೆಚ್ಚಿನ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಒಟ್ಟಾರೆ 10 ಲಕ್ಷ ಅಥವಾ ಹೆಚ್ಚಿನ ಮೊತ್ತ ಠೇವಣಿ ಇದ್ದರೆ ಅಂತಹ ಖಾತೆಗಳ ವಿವರವನ್ನು ಸಹಕಾರಿ ಬ್ಯಾಂಕ್‌ಗಳು ಅಥವಾ ಬ್ಯಾಂಕಿಂಗ್ ಕಂಪೆನಿಗಳು ಕಡ್ಡಾಯವಾಗಿ ನೀಡಬೇಕು.
► ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸಲು ಒಂದು ಆರ್ಥಿಕ ವರ್ಷದಲ್ಲಿ ಒಟ್ಟಾರೆ 1 ಲಕ್ಷ ರೂ. ಮೊತ್ತ ನಗದು ರೂಪದಲ್ಲಿ , ಚೆಕ್ ಅಥವಾ ಇನ್ನಿತರ ರೂಪದಲ್ಲಿ ಪಾವತಿಸಿದ ಬಗ್ಗೆ ವಿವರವನ್ನೂ ಸಲ್ಲಿಸಬೇಕು.
► ವ್ಯಕ್ತಿಯೋರ್ವ ಒಂದು ಆರ್ಥಿಕ ವರ್ಷದಲ್ಲಿ ಸಂಸ್ಥೆಯೊಂದರ ಬಾಂಡ್ ಅಥವಾ ಡಿಬೆಂಚರ್‌ಗಳ ಮೇಲೆ ಒಟ್ಟಾರೆ 10 ಲಕ್ಷ ಅಥವಾ ಅದಕ್ಕೂ ಹೆಚ್ಚು ಹಣ ವಿನಿಯೋಗಿಸಿದರೆ ಅಂಥಹ ವಿವರವನ್ನು ಆ ಸಂಸ್ಥೆ ಇಲಾಖೆಗೆ ಸಲ್ಲಿಸಬೇಕು.
► ಶೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಖರೀದಿ ಮತ್ತು ಮಾರಾಟಕ್ಕೂ ಇದೇ ನಿಯಮ ಅನ್ವಯಿಸುತ್ತದೆ.
► 10 ಲಕ್ಷ ರೂ. ಮೊತ್ತದ ವಿದೇಶ ವಿನಿಮಯ ಖರೀದಿ(ಟ್ರಾವೆಲರ್ಸ್ ಚೆಕ್, ಫಾರೆಕ್ಸ್ ಕಾರ್ಡ್ ಇತ್ಯಾದಿ)ಯ ಮಾಹಿತಿ ನೀಡಬೇಕು.
► 30 ಲಕ್ಷ ರೂ. ಮೊತ್ತದ ಸ್ಥಿರಾಸ್ತಿ ಖರೀದಿ/ಮಾರಾಟ ಸಂದರ್ಭ ಆಸ್ತಿಗಳ ನೋಂದಣಿ ಮಾಡುವವರು ಮಾಹಿತಿ ನೀಡಬೇಕು.
► 2 ಲಕ್ಷ ರೂ. ಮೊತ್ತದ ನಗದು ಪಾವತಿಸುವ ಯಾವುದೇ ವಿಧದ ಸರಕು ಅಥವಾ ಸೇವೆಯ ಬಗ್ಗೆ ಮಾಹಿತಿ ನೀಡಬೇಕು.
► ಓರ್ವ ವ್ಯಕ್ತಿ ಆರ್ಥಿಕ ವರ್ಷವೊಂದರಲ್ಲಿ ಒಟ್ಟಾರೆ 10 ಲಕ್ಷ ರೂ. ಮೊತ್ತದ ಹೊಸದು ಅಥವಾ ನವೀಕೃತಗೊಂಡಿರುವ ಒಂದು ಅಥವಾ ಹೆಚ್ಚಿನ ಆವಧಿಕ ಠೇವಣಿ(ಟೈಮ್ ಡಿಪಾಸಿಟ್) ಹೊಂದಿದ್ದರೆ ಆ ವಿವರ ನೀಡಬೇಕು.
► ಬ್ಯಾಂಕ್ ಡ್ರಾಫ್ಟ್ ಅಥವಾ ಪಾವತಿ ಆದೇಶ(ಪೇ ಆರ್ಡರ್), ಬ್ಯಾಂಕ್ ಚೆಕ್ ಮೂಲಕ ಅಥವಾ ನಗದು ರೂಪದಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಆರ್‌ಬಿಐಯ ಪ್ರಿ-ಪೇಯ್ಡಿ ಲಿಖಿತ ಪತ್ರಗಳ ಖರೀದಿಗೆ 10 ಲಕ್ಷ ಮೊತ್ತ ಪಾವತಿಸಿದ್ದರೆ ಆ ಬಗ್ಗೆ ವಿವರ ನೀಡಬೇಕು.
► ವ್ಯಕ್ತಿಯೋರ್ವನ ಚಾಲ್ತಿ ಖಾತೆಯಲ್ಲಿ (ಒಂದು ಅಥವಾ ಹೆಚ್ಚಿನ ಖಾತೆ) ಒಂದು ಆರ್ಥಿಕ ವರ್ಷದಲ್ಲಿ 50 ಲಕ್ಷ ರೂ. ಅಥವಾ ಹೆಚ್ಚಿನ ನಗದು ಠೇವಣಿ ಅಥವಾ ನಗದು ಹಿಂಪಡೆದ ಬಗ್ಗೆ ವಿವರವನ್ನು ಬ್ಯಾಂಕಿಂಗ್ ಕಂಪೆನಿಗಳು ಅಥವಾ ಸಹಕಾರ ಬ್ಯಾಂಕ್‌ಗಳು ನೀಡಬೇಕು.