ಮುಸ್ಲಿಮರಿಗೆ ಮೀಸಲಾತಿ: ತೆಲಂಗಾಣ ಸಿ.ಎಂ.ಪ್ರಸ್ತಾವನೆ ವಿರುದ್ಧ ಬಿಜೆಪಿ ಆಕ್ರೋಶ
ಹೈದರಾಬಾದ್,ಜ.19: ಮುಸ್ಲಿಮರಿಗೆ ಶೇ.12ರಷ್ಟು ಮೀಸಲಾತಿಯನ್ನು ಒದಗಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಇಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಿರುದ್ಧ ತೀವ್ರ ದಾಳಿ ನಡೆಸಿದ ಬಿಜೆಪಿಯು, ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಅಲ್ಪಸಂಖ್ಯಾತರ ವೋಟ್‌ಬ್ಯಾಂಕ್ ರಾಜಕೀಯವಾಗಿದೆ ಎಂದು ಕಿಡಿ ಕಾರಿದೆ.
ತನ್ನ ಸರಕಾರವು ಮುಸ್ಲಿಮರಿಗೆ ಶೇ.12 ಮೀಸಲಾತಿ ಒದಗಿಸಲಿದೆ ಎಂಬ ರಾವ್ ಹೇಳಿಕೆ ಸರ್ವೋಚ್ಚ ನ್ಯಾಯಾಲಯವು ನಿಗದಿಗೊಳಿಸಿರುವ ಮೀಸಲಾತಿ ಮಿತಿಯನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಗೊತ್ತಿದ್ದೂ ರಾಜಾರೋಷವಾಗಿ ಹೇಳಿರುವ ಸುಳ್ಳು ಮಾತ್ರವಲ್ಲ, ಸಂವಿಧಾನ ವಿರೋಧಿ ಮತ್ತು ವೋಟ್‌ಬ್ಯಾಂಕ್ ರಾಜಕೀಯವೂ ಆಗಿದೆ ಎಂದು ತೆಲಂಗಾಣ ಬಿಜೆಪಿಯ ಅಧಿಕೃತ ವಕ್ತಾರ ಕೃಷ್ಣಸಾಗರ ರಾವ್ ಅವರು ಹೇಳಿದರು.
ಮುಸ್ಲಿಮರಲ್ಲಿ ಹಿಂದುಳಿದ ವರ್ಗಗಳಿಗೆ ಶೇ.12ರಷ್ಟು ಮೀಸಲಾತಿಯನ್ನು ಒದಗಿಸುವ ಮಸೂದೆಯೊಂದನ್ನು ಸದನದ ಮುಂಗಡಪತ್ರ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ರಾವ್ ಬುಧವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದ್ದರು. ಈ ಕೋಟಾ ಟಿಆರ್‌ಎಸ್ ನೀಡಿದ್ದ ಮುಖ್ಯ ಚುನಾವಣಾ ಭರವಸೆಗಳಲ್ಲೊಂದಾಗಿದೆ.