×
Ad

ಸಿಎ, ಸಿಎಸ್ ಪರೀಕ್ಷೆಗಳಲ್ಲಿ ದೇಶಕ್ಕೇ ನಂ. 1 ಆದ ಇತಿ ಅಗರ್ವಾಲ್ ಗೆ ಐಎಎಸ್ ಕನಸು

Update: 2017-01-20 09:18 IST

ಲಕ್ನೋ, ಜ.20: ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿನ ಇತಿ ಅಗರ್ವಾಲ್ ದೇಶಕ್ಕೇ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಐಸಿಎಐ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಕರೆ ಮಾಡಿ, 800ರ ಪೈಕಿ 599 ಅಂಕ (ಶೇ. 74.88) ಅಂಕ ಪಡೆದಿರುವ ಇತಿಯನ್ನು ಅಭಿನಂದಿಸಿದ್ದಾರೆ. ಭಿವಾಂಡಿಯ ಪಿಯೂಷ್ ರಮೇಶ್ ಲೋಹಿಯಾ (71.75 ಶೇಕಡ) ದ್ವಿತೀಯ ಹಾಗೂ ಜ್ಯೋತಿ ಮುಖೇಶ್‌ಭಾಯ್ ಮಹೇಶ್ವರಿ (70.75) ನಂತರದ ಸ್ಥಾನದಲ್ಲಿದ್ದಾರೆ. ದೇಶಾದ್ಯಂತ ಒಟ್ಟು 7192 ಮಂದಿ ಸಿಎ ಅರ್ಹತೆ ಪಡೆದಿದ್ದಾರೆ.

2011ರಲ್ಲಿ ಇತಿ ಐಎಸ್‌ಸಿ (12ನೇ ಕ್ಲಾಸ್) ಪರೀಕ್ಷೆಯಲ್ಲಿ ಶೇಕಡ 98.75 ಅಂಕ ಪಡೆದು ದೇಶದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದರು. ಗಣಿತ ಹಾಗೂ ವಾಣಿಜ್ಯದಲ್ಲಿ ಶೇಕಡ 100 ಅಂಕ ಪಡೆದಿದ್ದರು. ಬಳಿಕ ಲಾ ಮಾರ್ಟಿನ್ ಗರ್ಲ್ಸ್ ಹಳೇ ವಿದ್ಯಾರ್ಥಿನಿಯಾದ ಇವರು ದಿಲ್ಲಿ ವಿವಿಯ ಶ್ರೀರಾಂ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಕಾಲೇಜಿನಲ್ಲಿ ಬಿಕಾಂ (ಆನರ್ಸ್) ಪದವಿ ಪಡೆದರು. ಸಿಪಿಟಿ ಪರೀಕ್ಷೆಯಲ್ಲಿ ಡಿಸ್ಟಿಂಗ್ಷನ್‌ನಲ್ಲಿ ಉತ್ತೀರ್ಣರಾಗಿ ಸಿಎ ಪ್ರವೇಶಕ್ಕೆ 2011ರ ಜೂನ್‌ನಲ್ಲಿ ಅರ್ಹತೆ ಪಡೆದರು. ಐಪಿಸಿಸಿ ಎರಡನೆ ಹಂತದ ಸಿಎಯಲ್ಲಿ 2013ರ ನವೆಂಬರ್‌ನಲ್ಲಿ ದೇಶಕ್ಕೇ ಅಗ್ರಸ್ಥಾನಿಯಾದರು.

ಇವರ ಸಾಧನೆ ಇಷ್ಟಕ್ಕೆ ಕೊನೆಗೊಳ್ಳಲಿಲ್ಲ. 2015ರ ಜೂನ್‌ನಲ್ಲಿ, ಎಕ್ಯುಕ್ಯೂಟಿವ್ ಹಂತದ ಕಂಪನಿ ಸೆಕ್ರೆಟರಿ ಪರೀಕ್ಷೆ ತೆಗೆದುಕೊಂಡರು. ಅಲ್ಲೂ ದೇಶಕ್ಕೆ ಅಗ್ರಸ್ಥಾನಿಯಾದರು. ಇತಿ ಪದವೀಧರರಾಗಿದ್ದರಿಂದ ಸಿಎಸ್ ಫೌಂಡೇಷನ್ ಪರೀಕ್ಷೆಯಿಂದ ಅವರಿಗೆ ವಿನಾಯಿತಿ ನೀಡಲಾಗಿತ್ತು. 2016ರ ನವೆಂಬರ್‌ನಲ್ಲಿ ಸಿಎ ಅಂತಿಮ ಪರೀಕ್ಷೆಗೆ ಹಾಜರಾದ ಬಳಿಕ ಅವರು ಮುಂದಿನ ತಿಂಗಳು ಸಿಎಸ್ ಫೈನಲ್ ಪರೀಕ್ಷೆಯನ್ನೂ ತೆಗೆದುಕೊಂಡರು. ಅದರ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.

ದಿಲ್ಲಿಯಲ್ಲಿ ಉದ್ಯೋಗದಲ್ಲಿರುವ ಅವರು ದೂರವಾಣಿ ಮೂಲಕ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿ, "ನಿಮ್ಮ ಕೆಲಸವನ್ನು ಯೋಜಿಸಿಕೊಳ್ಳಿ. ನಿಮ್ಮ ಯೋಜನೆಯಂತೆ ಕೆಲಸ ಮಾಡಿ. ಇದು ಶಾಲಾ ದಿನಗಳಿಂದಲೂ ನನ್ನ ದೃಢ ನಂಬಿಕೆ. ಇದು ನನಗೆ ಯಶಸ್ಸು ತಂದುಕೊಟ್ಟಿದೆ" ಎಂದು ಸಂತಸ ಹಂಚಿಕೊಂಡರು.

ಇತಿ ಇದೀಗ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳುವ ಗುರಿ ಹೊಂದಿದ್ದಾರೆ. "ಸಿಎ ಅರ್ಹತೆ ಪಡೆದ ಬಳಿಕ ಇದೀಗ ದೇಶಕ್ಕಾಗಿ ಸೇವೆ ಮಾಡಬೇಕು ಎನ್ನುವುದು ನನಗೆ ಮನವರಿಕೆಯಾಗಿದೆ. ಸಿಎ ಅಥವಾ ಸಿಎಸ್ ಆಗಿ ಕೆಲಸ ಮಾಡಿದರೆ ನಾನು ಬೇರೆಯವರಿಗಾಗಿ ಕೆಲಸ ಮಾಡುತ್ತೇನೆ. ಆದರೆ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾದರೆ ದೇಶಕ್ಕಾಗಿ ಸೇವೆ ಮಾಡಲು ಅವಕಾಶವಾಗುತ್ತದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News