ಹರ್ಯಾಣದಲ್ಲಿ ಜಾಟರ ಪ್ರತಿಭಟನೆ ಸಂದರ್ಭ ಅತ್ಯಾಚಾರ ನಡೆದಿದೆ: ಹೈಕೋರ್ಟ್
ಚಂಡೀಗಢ, ಜ.20: ಕಳೆದ ಫೆಬ್ರವರಿಯಲ್ಲಿ ಮೀಸಲಾತಿ ಆಗ್ರಹಿಸಿ ಜಾಟರು ನಡೆಸಿದ ಹಿಂಸಾತ್ಮಕ ಪ್ರತಿಭಟನೆ ವೇಳೆ ಮುರ್ತಾಲ್ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವುದು ನಿಜ; ಸಾಕ್ಷಿಗಳ ಹೇಳಿಕೆ ಹಾಗೂ ಪ್ರದೇಶದಿಂದ ವಶಪಡಿಸಿಕೊಂಡ ಮಹಿಳೆಯರ ಒಳ ಉಡುಪುಗಳಿಂದ ಇದು ದೃಢಪಟ್ಟಿದೆ ಎಂದು ಪಂಜಾಬ್- ಹರ್ಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜನರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ರಾಜ್ಯ ಪೊಲೀಸ್ ಇಲಾಖೆ ತಕ್ಷಣ ವಿಶೇಷ ತನಿಖಾ ತಂಡವನ್ನು ರಚಿಸಿ, ಈ ಬಗ್ಗೆ ತನಿಖೆ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ. ಹೈಕೋರ್ಟ್‌ನ ವಿಭಾಗೀಯ ಪೀಠ ಬಹಿರಂಗ ವಿಚಾರಣೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಬ್ಬ ಕಾರು ಚಾಲಕ ಸೇರಿದಂತೆ ಇಬ್ಬರು ಸಾಕ್ಷಿಗಳನ್ನು ನ್ಯಾಯಪೀಠ ಪರಿಗಣಿಸಿದೆ. ಮಹಿಳೆಯರನ್ನು ವಾಹನದಿಂದ ಎಳೆದೊಯ್ದು ಕರೆದೊಯ್ಯಲಾಗಿದೆ. ಇದು ಅತ್ಯಾಚಾರ ನಡೆದಿರಬಹುದು ಎನ್ನುವುದನ್ನು ಸೂಚಿಸುತ್ತದೆ ಎಂದು ಸಾಕ್ಷಿ ನುಡಿದಿದ್ದರು.
ಅತ್ಯಾಚಾರ ಪ್ರಕರಣ ಸಂಬಂಧ ಸೋನಿಪತ್ ವಿಚಾರಣಾ ನ್ಯಾಯಾಲಯ ಆರೋಪವನ್ನು ಫ್ರೇಮ್ ಮಾಡುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪತ್ರಿಕಾ ವರದಿಗಳ ಆಧಾರದಲ್ಲಿ ಹೈಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದ ಹಿನ್ನೆಲೆಯಲ್ಲಿ ಹರ್ಯಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಪೊಲೀಸರು ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು, ಆದರೆ ಪ್ರಯೋಗಾಲಯ ಪರೀಕ್ಷೆಯಲ್ಲಿ ಅವರ ರಕ್ತ ಹಾಗೂ ಒಳ ಉಡುಪಿನಲ್ಲಿದ್ದ ವೀರ್ಯದ ಕಣಗಳು ತಾಳೆಯಾಗದ ಕಾರಣ ಆರೋಪ ಕೈಬಿಡಲಾಗಿತ್ತು.