ಚರ್ಚ್‌ಕೋರ್ಟ್‌ಗಳ ವಿಚ್ಛೇದನ ಆದೇಶಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಜ.20: ಚರ್ಚ್‌ಕೋರ್ಟ್‌ಗಳು ನೀಡಿದ ವಿಚ್ಛೇದನ ಆದೇಶವನ್ನು ಕಾನೂನುಬದ್ಧ ಎಂದು ಪರಿಗಣಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಂದರೆ ಅಂಥ ವಿಚ್ಛೇದನ ಪಡೆದು ಮರು ವಿವಾಹವಾದಲ್ಲಿ ಅದು ಕಾನೂನುಬಾಹಿರ ಎನಿಸಿಕೊಂಡು ದ್ವಿಪತ್ನಿತ್ವದ ಅಪರಾಧ ಎಸಗಿದಂತಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಾಲ್ಕು ವರ್ಷ ಹಿಂದೆ ಬೆಂಗಳೂರು ಮೂಲದ ಚರ್ಚ್‌ಕೋರ್ಟ್ ವಕೀಲ ಕ್ಲೇರೆನ್ಸ್ ಪಾಯಸ್ ಸಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿರಸ್ಕರಿಸಿದ್ದಾರೆ. ಅಂಥ ವಿಚ್ಛೇದನಗಳಿಗೆ ಕಾನೂನು ಮಾನ್ಯತೆ ಕೋರಿ ಪಾಯಸ್ ಅರ್ಜಿ ಸಲ್ಲಿಸಿದ್ದರು. ಕ್ರೈಸ್ತ ಸಂಪ್ರದಾಯದಲ್ಲಿ ವಿವಾಹ ಹಾಗೂ ವಿಚ್ಛೇದನವನ್ನು ಚರ್ಚ್ ನಿರ್ವಹಿಸುತ್ತದೆ. ಇದಕ್ಕೆ ಕಾನೂನು ಮಾನ್ಯತೆ ನೀಡದಿದ್ದರೆ, ಹಲವು ಮಂದಿ ಅನಗತ್ಯವಾಗಿ ದ್ವಿಪತ್ನಿತ್ವದ ಆರೋಪದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ನೀರಜ್ ಕೃಷ್ಣನ್ ಕೌಲ್ ಅವರು ಮೊಲ್ಲಿ ಜೋಸೆಫ್ ಹಾಗೂ ಜಾರ್ಜ್ ಸೆಬಾಸ್ಟಿಯನ್ ಪ್ರಕರಣದಲ್ಲಿ 1996ರಲ್ಲೇ ಈ ವಿಚಾರವನ್ನು ಕೋರ್ಟ್ ಇತ್ಯರ್ಥಪಡಿಸಿದೆ ಎಂದು ವಾದಿಸಿದ್ದರು.
"ವಿಚ್ಛೇದನಾ ನ್ಯಾಯಾಲಯವು ಚರ್ಚ್‌ಕೋರ್ಟ್‌ಗಳ ಅಧಿಕಾರ ವ್ಯಾಪ್ತಿಯನ್ನು ಪರಿಗಣಿಸುವವರೆಗೂ ಇಂಥ ಕೋರ್ಟ್‌ಗಳು ಹೊರಡಿಸುವ ಯಾವ ಆದೇಶಕ್ಕೂ ಕಾನೂನು ಮಾನ್ಯತೆ ಇಲ್ಲ" ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.
ಈ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ, ಚರ್ಚ್‌ಕೋರ್ಟ್‌ನಲ್ಲಿ ವಿಚ್ಛೇದನ ಪಡೆದರೂ, ಕ್ರಿಶ್ಚಿಯನ್ ವಿಚ್ಛೇದನ ಕಾಯ್ದೆ- 1869ರ ಅನ್ವಯ ನ್ಯಾಯಾಲಯದಿಂದ ಡಿಕ್ರಿ ಪಡೆಯದಿದ್ದರೆ ಅದಕ್ಕೆ ಕಾನೂನು ಮಾನ್ಯತೆ ಇರುವುದಲ್ಲ. ಅಂಥ ವ್ಯಕ್ತಿಗಳು ದ್ವಿಪತ್ನಿತ್ವ ಆರೋಪದ ವಿಚಾರಣೆ ಎದುರಿಸಬೇಕಾಗುತ್ತದೆ.