ಎರಡು ದಿನಗಳಲ್ಲಿ ಜಲ್ಲಿಕಟ್ಟು ಕ್ರೀಡೆಗೆ ನಿರ್ಭಂದ ತೆರವು : ಸಿಎಂ ಪನ್ನೀರ್ ಸೆಲ್ವಂ ವಿಶ್ವಾಸ
ಚೆನ್ನೈ,ಜ.20: ಇನ್ನೆರಡು ದಿನಗಳಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ನಿರ್ಭಂಧ ತೆರವಾಗಲಿದ್ದು, ಇದಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಯ ಕರಡು ಪ್ರತಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ತಮಿಳುನಾಡು ಮುಖ್ಯ ಮಂತ್ರಿ ಓ. ಪನ್ನೀರ್ ಸೆಲ್ವಂ ತಿಳಿಸಿದ್ದಾರೆ.
ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧವನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತೆರವುಗೊಳಿಸಬೇಕೆಂದು ಆಗ್ರಹಿಸಿ ತಮಿಳುನಾಡು ಮುಖ್ಯ ಮಂತ್ರಿ ಪನ್ನೀರ್ ಸೆಲ್ವಂ ಗುರುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸಿದ್ದರು. ಆದರೆ ಪ್ರಧಾನಿ ಮೋದಿ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕೇಂದ್ರದ ಕೈ ಕಟ್ಟಿ ಹಾಕಲಾಗಿದೆ ಎಂದು ಹೇಳಿದ್ದರು.ಆದರೆ ಸುಗ್ರೀವಾಜ್ಞೆ ಬಗ್ಗೆ ಅವರೇನು ಮಾತನಾಡಿರಲಿಲ್ಲ.
ಜಲ್ಲಿಕಟ್ಟು ಕ್ರೀಡೆ ಮೇಲೆ ಹೇರಲಾಗಿರುವ ನಿಷೇಧವನ್ನು ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಇಂದಿಗೆ ನಾಲ್ಕನೆ ದಿನಕ್ಕೆ ಕಾಲಿರಿಸಿದ್ದು, ತಮಿಳುನಾಡು ಇಂದು ಬಂದ್ ಆಗಿದೆ. ವಿವಿಧ ತಮಿಳುಪರ ಸಂಘಟನೆಗಳು ತಮಿಳುನಾಡು ಬಂದ್ ಗೆ ಕರೆ ನೀಡಿವೆ.
ವಿದ್ಯಾರ್ಥಿ ಸಂಘಟನೆಗಳು, ಆಟೋ, ಟ್ಯಾಕ್ಸಿ ಮತ್ತು ಲಾರಿ ಚಾಲಕರ ಸಂಘಟನೆಗಳು ಬಂದ್ ನ್ನು ಬೆಂಬಲಿಸಿದ್ದು, ತಮಿಳು ಚಿತ್ರರಂಗ ಬೆಂಬಲ ನೀಡುವ ಜೊತೆಗೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ. ಜಲ್ಲಿಕಟ್ಟು ಸ್ಪರ್ಧೆಗೆ ಹೇರಲಾಗಿರುವ ನಿಷೇಧವನ್ನು ವಿರೋಧಿಸಿ ಮಾಂಬ್ರಮ್ ರೈ ಲು ನಿಲ್ದಾಣದಲ್ಲಿ ರೈಲು ತಡೆದು ಧರಣಿ ನಡೆಸಿದ ಡಿಎಂಕೆ ಕಾರ್ಯಾಧ್ಯಕ್ಷ ಎಂಎಕೆ ಸ್ಟಾಲಿನ್ ಮತ್ತಿತರರನ್ನು ಪೊಲೀಸರು ಬಂಧಿಸಿದ್ದಾರೆ.