ಬಿಗ್ ಬಿ ವಿರುದ್ಧವೇ ‘ಖುಲ್ಲಂ ಖುಲ್ಲಾ ’ದಾಳಿ ಮಾಡಿದ ರಿಷಿ ಕಪೂರ್ ಹೇಳಿದ್ದೇನು?

Update: 2017-01-20 11:39 GMT

ಮುಂಬೈ,ಜ.20: ಕೆಲವು ಕಲೆಗಳು ಹಾಗೆಯೇ...ವರ್ಷಗಳುರುಳಿದರೂ ಮಾಸುವುದಿಲ್ಲ. ಹಾರ್ಪರ್ ಕಾಲಿನ್ಸ್ ಪ್ರಕಾಶನದಲ್ಲಿ ಇತ್ತೀಚಿಗೆ ಬಿಡುಗಡೆಗೊಂಡಿರುವ ತನ್ನ ಆತ್ಮಚರಿತ್ರೆ ‘ಖುಲ್ಲಂ ಖುಲ್ಲಾ ’ದಲ್ಲಿ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಅವರು ಇಂತಹ ಕೆಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ.

ಬಾಲಿವುಡ್‌ನ ‘ಬಿಗ್ ಬಿ’ ಅಮಿತಾಬ್ ಬಚ್ಚನ್‌ಗೆ ಸಂಬಂಧಿಸಿದ ವಿವಾದ ಇವುಗಳಲ್ಲೊಂದಾಗಿದೆ ಮತ್ತು ಇದನ್ನು ರಿಷಿ ಈಗಲೂ ತನ್ನ ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಕಭೀ ಕಭೀ,ಅಮರ್ ಅಕ್ಬರ್ ಅಂಥೋನಿ,ನಸೀಬ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಈ ಮೇರುನಟರಿಬ್ಬರು ನಟಿಸಿದ್ದರು.

70ರ ದಶಕ ಹಿಂದಿ ಚಿತ್ರರಂಗದಲ್ಲಿ ಆ್ಯಕ್ಷನ್ ಚಿತ್ರಗಳ ಯುಗವಾಗಿತ್ತು. ಅಮಿತಾಬ್ ಆ್ಯಕ್ಷನ್ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುತ್ತಿದ್ದರಿಂದ ಈ ಟ್ರೆಂಡ್‌ನ ಲಾಭವನ್ನು ಇತರ ನಟರಿಗಿಂತ ಹೆಚ್ಚಾಗಿಯೇ ಪಡೆದುಕೊಂಡಿದ್ದರು ಎಂದು ರಿಷಿ ಬರೆದಿದ್ದಾರೆ.

 ‘‘ನಾನು ನಟಿಸಿದ್ದ ಯಾವುದೇ ಮಲ್ಟಿ ಸ್ಟಾರ್ ಚಿತ್ರಗಳಲ್ಲಿ ಕಥಾ ಲೇಖಕ ನನಗಾಗಿಯೇ ರೂಪಿಸಿದ್ದ ಪಾತ್ರವಿರಲಿಲ್ಲ. ನಿರ್ದೇಶಕರು ಮತ್ತು ಲೇಖಕರು ತಮ್ಮ ಅತ್ಯಂತ ಶಕ್ತಿಶಾಲಿ ಪಾತ್ರಗಳನ್ನು ಹರಕೆ ಹೊತ್ತವರಂತೆ ಅಮಿತಾಬ್‌ಗೇ ಮಿಸಲಿಡುತ್ತಿದ್ದರು. ಇದು ನನ್ನೊಬ್ಬನ ವಿಷಯವಲ್ಲ, ಶಶಿಕಪೂರ್, ಶತ್ರುಘ್ನ ಸಿನ್ಹಾ,ಧರ್ಮೇಂದ್ರ ಮತ್ತು ವಿನೋದ್‌ಖನ್ನಾರಂತಹ ಮಹಾನ್ ನಟರೂ ಇದನ್ನು ಅನುಭವಿಸಿದ್ದಾರೆ ’’ ಎಂದಿರುವ ರಿಷಿ, ಅಮಿತಾಬ್‌ರ ಪಾತ್ರಕ್ಕೆ ಸರಿಸಾಟಿಯಾಗಲು ಇತರ ನಟರು ತಮ್ಮೆಲ್ಲ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಾಗಿತ್ತು ಎಂದಿದ್ದಾರೆ.

‘‘ಆ್ಯಕ್ಷನ್ ಚಿತ್ರಗಳ ಯುಗದಲ್ಲಿ ಅಮಿತಾಬ್ ಆ್ಯಕ್ಷನ್ ಹಿರೋ ಆಗಿದ್ದರು. ಹೀಗಾಗಿ ಕಥಾ ಲೇಖಕರು ಸಿಂಹಪಾಲನ್ನು ಅವರಿಗೇ ನೀಡುತ್ತಿದ್ದರು ಮತ್ತು ಹೆಚ್ಚುಕಡಿಮೆ ತನ್ನೆಲ್ಲ ಚಿತ್ರಗಳಲ್ಲೂ ಲೇಖಕರ ದಯೆಯಿಂದ ಅಮಿತಾಬ್‌ಗೆ ಮಹತ್ವದ ಪಾತ್ರಗಳೇ ದೊರೆಯುತ್ತಿದ್ದವು. ಇದು ಅವರಿಗೆ ಇತರರಿಗಿಂತ ಹೆಚ್ಚಿನ ಅವಕಾಶವನ್ನು ನೀಡಿತ್ತು ಮತ್ತು ನಾವೆಲ್ಲ ನಮಗೆ ಸಿಕ್ಕಿದ ಪಾತ್ರಗಳಲ್ಲೇ ನಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳಲು ಹೆಣಗಾಡಬೇಕಾಗಿತ್ತು ’’ ಎಂದು ರಿಷಿ ಬರೆದಿದ್ದಾರೆ. ಅಮಿತಾಬ್ ಅತ್ಯಂತ ಪ್ರತಿಭಾವಂತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದಿರುವ ಅವರು, ತನ್ನ ಯಶಸ್ಸಿನಲ್ಲಿ ಸಹನಟರ ಪಾತ್ರವಿದ್ದರೂ ಅದರ ಶ್ರೇಯಸ್ಸನ್ನು ಅವರೆಂದೂ ಈ ಬಡಪಾಯಿ ನಟರಿಗೆ ನೀಡಿರಲಿಲ್ಲ ಎಂದು ಕುಟುಕಿದ್ದಾರೆ.

 ಅಮಿತಾಬ್ ಅವರು ಯಾವುದೇ ಸಂದರ್ಶನ ಅಥವಾ ಪುಸ್ತಕದಲ್ಲಿ ಎಂದೂ ಒಪ್ಪಿಕೊಂಡಿರದ ವಿಷಯವೊಂದಿದೆ. ತನ್ನೊಂದಿಗೆ ಕೆಲಸ ಮಾಡಿದ ಸಹನಟರ ಬಗ್ಗೆ, ಅವರು ಅರ್ಹರಿದ್ದರೂ...ಎಂದೂ ಮೆಚ್ಚುಗೆಯ ಮಾತುಗಳನ್ನು ಆಡಿರಲಿಲ್ಲ. ಅವರಿಗೆ ಯಾವುದೇ ಹೆಗ್ಗಳಿಕೆಯನ್ನು ನೀಡಿರಲಿಲ್ಲ. ಅವರು ತನ್ನ ಲೇಖಕರು ಮತ್ತು ನಿರ್ದೇಶಕರಾದ ಸಲೀಂ-ಜಾವೇದ್, ಮನಮೋಹನ್ ದೇಸಾಯಿ, ಪ್ರಕಾಶ ಮೆಹ್ರಾ, ಯಶ್ ಚೋಪ್ಡಾ ಮತ್ತು ರಮೇಶ ಸಿಪ್ಪಿಯವರನ್ನೇ ತನ್ನ ಯಶಸ್ಸಿಗಾಗಿ ಹೊಗಳುತ್ತಿದ್ದರು. ಆದರೆ ಸಹನಟರು ಅವರ ಯಶಸ್ಸಿನಲ್ಲಿ ನಿರಾಕರಿಸಲಾಗದ ಪಾತ್ರ ಹೊಂದಿದ್ದರು ಎನ್ನುವುದೂ ಸತ್ಯ ಎಂದಿರುವ ರಿಷಿ, ಅದು ‘ದೀವಾರ್ ’ನಲ್ಲಿಯ ಶಶಿಕಪೂರ್ ಆಗಿರಲಿ,‘ಅಮರ್ ಅಕ್ಬರ್ ಅಂಥೋನಿ ’ಯಲ್ಲಿನ ತಾನೇ ಆಗಿರಲಿ ಅಥವಾ ಶೋಲೆಯಲ್ಲಿನ ಧರ್ಮೇಂದ್ರ ಅಥವಾ ಶತ್ರುಘ್ನ ಸಿನ್ಹಾ ಅಥವಾ ವಿನೋದ್ ಖನ್ನಾ ಆಗಿರಲಿ, ಇವರೆಲ್ಲ ಉಪ ಪ್ರಧಾನ ಪಾತ್ರಗಳಲ್ಲಿದ್ದರೂ ಅಮಿತಾಬ್‌ರ ಯಶಸ್ಸಿಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ. ಆದರೆ ಇದನ್ನು ಈವರೆಗೂ ಯಾರೂ ಅರಿತುಕೊಂಡಿಲ್ಲ ಅಥವಾ ಒಪ್ಪಿಕೊಂಡಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News