ಬುರ್ಖಾ ವಿರೋಧಿಸಲು ತನ್ನ ಹೆಸರು ಎಳೆದು ತಂದ ಕೇಂದ್ರ ಸಚಿವನ ಬಾಯಿ ಮುಚ್ಚಿಸಿದ ದಂಗಲ್ ಹುಡುಗಿ

Update: 2017-01-20 12:49 GMT

ಹೊಸದಿಲ್ಲಿ,ಜ.20: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಭೇಟಿಯಾಗಿ ವಿವಾದಕ್ಕೀಡಾಗಿದ್ದ ದಂಗಲ್ ಹುಡುಗಿ ಝೈರಾ ವಸೀಮ್ ಇದೀಗ ಕೇಂದ್ರ ಸಚಿವರ ಬಾಯಿ ಮುಚ್ಚಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಬುರ್ಖಾ ವಿರೋಧಿಸಲು ತನ್ನ ಹೆಸರು ಎಳೆದು ತಂದ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರ ಬಾಯಿ ಮುಚ್ಚಿಸಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿದೆ. ವಾಸ್ತವವಾಗಿ ಸಚಿವರ ಈ ವಿವಾದಾತ್ಮಕ ಟ್ವೀಟ್, ಝೈರಾ ಬಗ್ಗೆ ಅನುಕಂಪ ವ್ಯಕ್ತಪಡಿಸುವಂಥದ್ದೇ ಅಥವಾ ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡುವ ಉದ್ದೇಶದ್ದೇ ಎನ್ನುವುದು ಗೊತ್ತಾಗಿಲ್ಲ.

ಇಡೀ ಪ್ರಹಸನದ ಸಾರಾಂಶ ಇಷ್ಟು: ಗೋಯಲ್ ಒಂದು ಕಲಾಕೃತಿಯನ್ನು ವೀಕ್ಷಿಸುತ್ತಿರುವ ಚಿತ್ರ ಟ್ವೀಟ್ಟ್ ಮಾಡಿದ್ದಾರೆ. ಈ ಕಲಾಕೃತಿಯಲ್ಲಿ ಅಸಹಾಯಕ ಮಹಿಳೆಯೊಬ್ಬರು ಪಂಜರದಲ್ಲಿದ್ದಾರೆ; ಹಿನ್ನೆಲೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯ ಚಿತ್ರ ಇದೆ. ಈ ಚಿತ್ರ ಬುರ್ಖಾವನ್ನು ಇಸ್ಲಾಮಿಕ್ ದಬ್ಬಾಳಿಕೆಯ ಸಂಕೇತವಾಗಿ ಬಿಂಬಿಸಿದೆ. ಸಚಿವರು ಇದನ್ನು ಝೈರಾ ಪಯಣದ ಜತೆ ಸಮೀಕರಿಸಲು ಹೊರಟು ಎಡವಟ್ಟು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಸಚಿವರು "ಈ ಚಿತ್ರ ಝೈರಾ ವಸೀಂ ಕಥೆಗೆ ಸಮನಾದ ಕಥೆಯನ್ನು ಹೇಳುತ್ತದೆ. ನಮ್ಮ ಹೆಣ್ಣುಮಕ್ಕಳಿಗೆ ಹೆಚ್ಚು ಶಕ್ತಿ ತುಂಬಬೇಕು"’ ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಟ್ವೀಟ್ ಮಾಡಿದ್ದಾರೆ.

ತಕ್ಷಣ ಇದಕ್ಕೆ ಪ್ರತಿಕ್ರಿಸಿದ ಈ ಯುವ ನಟಿ, ಮಾನ್ಯರೇ, ನಿಮ್ಮ ಬಗ್ಗೆ ತುಂಬುಗೌರವ ಇದೆ. ಆದರೆ  ಇದನ್ನು ನಾನು ಒಪ್ಪುವುದಿಲ್ಲ. ಇಂಥ ಅನುಚಿತ ಚಿತ್ರಕ್ಕೂ ನನಗೂ ಸಂಬಂಧ ಕಲ್ಪಿಸಬೇಡಿ ಎಂದು ಟ್ವೀಟಿಸಿದರು. ಜತೆಗೆ ಹಿಜಾಬ್‌ನಲ್ಲೂ ಮಹಿಳೆಯರು ಸುಂದರ ಹಾಗೂ ಮುಕ್ತವಾಗಿದ್ದಾರೆ ಎಂದು ಹೇಳುವ ಮೂಲಕ ಸಚಿವರ ಬಾಯಿ ಮುಚ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News