ಉತ್ತರಾಖಂಡದಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ !
ಡೆಹ್ರಾಡೂನ್, ಜ.21: ಉತ್ತರಾಖಂಡದಲ್ಲಿ ಅಸೆಂಬ್ಲಿ ಚುನಾವಣೆಗೆ ಇನ್ನು ಒಂದು ತಿಂಗಳೂ ಉಳಿದಿಲ್ಲ. ಆದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಇಲ್ಲಿ ಚುನಾವಣೆಗೆ ಕಣಕ್ಕಿಳಿಸಲು ಅಭ್ಯರ್ಥಿಗಳನ್ನು ಹುಡುಕಲು ಪರದಾಡುತ್ತಿದೆ. ಪಕ್ಷದ ಹಲವು ನಾಯಕರು ಈಗಾಗಲೇ ಬಿಜೆಪಿ ತೆಕ್ಕೆಗೆ ಸೇರಿರುವುದರಿಂದ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಸಂಕಟ ಸ್ಥಿತಿಯಲ್ಲಿದ್ದಾರೆ. ಪಕ್ಷವು ಅಭ್ಯರ್ಥಿಗಳನ್ನು ಗುರುವಾರ ಘೋಷಿಸಬೇಕಿದ್ದರೂ ಅದನ್ನು ಮುಂದೂಡಲಾಗಿದೆ.
ಮೂಲಗಳ ಪ್ರಕಾರ ಮುಖ್ಯಮಂತ್ರಿ ಈಗಾಗಲೇ ಬಿಜೆಪಿಯ ಅಸಂತುಷ್ಟರನ್ನು ಹಾಗೂ ಸ್ವತಂತ್ರವಾಗಿ ಸ್ಪ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳನ್ನು ಹುಡುಕಾಡುತ್ತಿದ್ದಾರೆ ಹಾಗೂ ಅವರೊಂದಿಗೆ ಏನಾದರೂ ಹೊಂದಾಣಿಕೆ ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸುತ್ತಿದ್ದಾರೆ. ತಮ್ಮದೇ ಪಕ್ಷದಲ್ಲಿ ಒಂದೊಮ್ಮೆ ಇದ್ದು ಇದೀಗ ಬಿಜೆಪಿ ಸೇರಿ ಆ ಪಕ್ಷದಿಂದ ಸ್ಪರ್ಧಿಸುವ ನಾಯಕರಿಗೆ ಸೂಕ್ತ ಎದುರಾಳಿಗಳನ್ನು ಹುಡುಕುವುದು ಮುಖ್ಯಮಂತ್ರಿಗೆ ಸವಾಲಿನ ಕೆಲಸವಾಗಿ ಬಿಟ್ಟಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಚಿವರೂ ಆಗಿದ್ದ ಯಶಪಾಲ್ ಆರ್ಯ ಅವರು ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷನ್ನು ಸೇರಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅವರನ್ನು ಬಿಜೆಪಿಯು ನೈನಿತಾಲ್ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ. ಯಶಪಾಲ್ ಅವರ ಜತೆ ಅವರ ಪುತ್ರ ಸಂಜೀವ್ ಆರ್ಯ ಕೂಡ ಬಿಜೆಪಿ ಸೇರಿದ್ದಾರೆ. ಇನ್ನೊಬ್ಬ ಕಾಂಗ್ರೆಸ್ ನಾಯಕ ಕೇದಾರ್ ಸಿಂಗ್ ರಾವತ್ ಅವರು ಯಶಪಾಲ್ ಅವರಿಗಿಂತ ಮುಂಚೆಯೇ ಬಿಜೆಪಿ ಸೇರಿದ್ದು, ಅವರಿಗೆ ಬಿಜೆಪಿ ಯಮುನೇತ್ರಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬಹುದೆಂದು ಹೇಳಲಾಗುತ್ತಿದೆ.