ಸಹೋದರನ ಕೃತ್ಯಕ್ಕೆ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ ಅಮಾಯಕ!
ಬಿಜ್ನೋರ್, ಜ.21: ತನ್ನ ಸಹೋದರ ಪಪ್ಪು ಎಂಬಾತ ಮಾಡಿದ ತಪ್ಪಿಗೆ 43 ವರ್ಷದ ಬಾಲಾ ಸಿಂಗ್ ಎಂಬಾತ 10 ವರ್ಷ ಜೈಲು ಸಜೆ ಅನುಭವಿಸಿ ಶುಕ್ರವಾರ ಬಿಡುಗಡೆಯಾದ ಘಟನೆ ಬಿಜ್ನೋರ್‌ನಲ್ಲಿ ನಡೆದಿದೆ.
‘‘ಆರೋಪಿ ಸಹೋದರ ಪಪ್ಪು ತಾನಲ್ಲ ಎಂದು ಸಾಬೀತುಪಡಿಸಲು ತನ್ನ ಬಳಿ ಅಧಿಕೃತ ದಾಖಲೆ ಇಲ್ಲದೇ ಇದ್ದ ಕಾರಣ ನನ್ನ ಅಮೂಲ್ಯ ಹತ್ತು ವರ್ಷ ಯೌವನ ವನ್ನು ಜೈಲಿನಲ್ಲಿ ಕಳೆದಿದ್ದೇನೆ ’’ ಎಂದು ಸಿಂಗ್ ಹೇಳಿದ್ದಾರೆ.
2001ರಲ್ಲಿ ಸಾಬುದಾಲ ಗ್ರಾಮದ ನಿವಾಸಿ ಧರ್ಮಪಾಲ ಎಂಬಾತನ ಕೊಲೆಗೆ ಸಂಬಂಧಿಸಿ ಪಪ್ಪು ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಪಪ್ಪು ಪೊಲೀಸರ ಕೈಗೆ ಸಿಗಲಿಲ್ಲ. ಪ್ರಕರಣದ ತನಿಖೆಗೆ ಸಂಬಂಧಿಸಿ ನ್ಯಾಯಾಲಯ ಪ್ರಮುಖ ಆರೋಪಿ ಪಪ್ಪುವನ್ನು ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಒತ್ತಡಕ್ಕೆ ಸಿಲುಕಿದ ಪೊಲೀಸರು ನೈಜ ಕೊಲೆ ಆರೋಪಿಯ ಪತ್ತೆ ಹಚ್ಚಲು 2006ರ ಎ.30 ರಂದು ಬಾಲಾ ಎಂಬಾತನನ್ನು ಬಂಧಿಸಿದರು. ಬಾಲನನ್ನು ಪಪ್ಪು ಎಂದು ಹೇಳಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆ ಬಳಿಕ ಬಾಲಾ ಜೈಲು ಪಾಲಾದರು.
ಬಾಲಾಗೆ ನ್ಯಾಯ ಸಿಗಲು ವಿಳಂಬವಾಗಿದ್ದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಜೈಲು ಅಧೀಕ್ಷಕ ಡಿಸಿ ಮಿಶ್ರಾ,‘‘ಈ ಮೊದಲು ನಡೆದ ಪ್ರಕರಣದಲ್ಲಿ ಸಿಲುಕಿದ್ದ ಪಪ್ಪುವಿನ ಬೆರಳಚ್ಚು ನಮ್ಮ ಬಳಿ ಇತ್ತು. ಬಾಲಾ ಹಾಗೂ ಪಪ್ಪು ಬೇರೆ ಬೇರೆ ವ್ಯಕ್ತಿಗಳೇ ಎಂದು ಖಚಿತಪಡಿಸಲು ಕಳೆದ ವರ್ಷ ಬಾಲಾ ಹಾಗೂ ಪಪ್ಪುವಿನ ಬೆರಳಚ್ಚನ್ನು ಪರೀಕ್ಷೆಗಾಗಿ ಲಕ್ನೋದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೆವು. ಬಾಲಾ ಸಿಂಗ್-ಪಪ್ಪು ಬೇರೆ ಬೇರೆ ವ್ಯಕ್ತಿಗಳು ಲ್ಯಾಬ್‌ನಲ್ಲಿ ಗೊತ್ತಾಗಿತ್ತು’’ಎಂದು ಅವರು ಹೇಳಿದ್ದಾರೆ.
‘‘ನನಗೆ ಕೊನೆಗೂ ನ್ಯಾಯ ಲಭಿಸಿದೆ. ಆದರೆ, ನನ್ನ ಜೀವನದ ಪ್ರಮುಖ ವರ್ಷಗಳನ್ನು ಜೈಲಿನಲ್ಲಿ ಕಳೆದಿರುವೆ. 10 ವರ್ಷಗಳ ಹಿಂದೆ ನಾನು ಯುವಕನಾಗಿದ್ದು, ನನ್ನಲ್ಲಿ ತುಂಬಾ ವಿಶ್ವಾಸವಿತ್ತು. ನನಗೀಗ ವಯಸ್ಸಾಗಿದೆ. ನನ್ನ ಎಲ್ಲ ಕನಸು ಭಗ್ನವಾಗಿದೆ. ನಾನು ಏನೂ ತಪ್ಪು ಮಾಡದಿದ್ದರೂ ಹಗಲು-ರಾತ್ರಿ ಜೈಲಿನಲ್ಲಿ ಕಾಲ ಕಳೆಯಬೇಕಾಯಿತು’’ ಎಂದು ಬಡ ಕುಟುಂಬದಿಂದ ಬಂದಿರುವ ಬಾಲಾ ನೋವು ತೋಡಿಕೊಂಡಿದ್ದಾರೆ.
ಕೂಲಿ ಕಾರ್ಮಿಕನಾಗಿದ್ದ ಬಾಲಾ ಸಿಂಗ್ ಅವರ ತಾಯಿ ರಾಜ್‌ಕುಮಾರಿ(66ವರ್ಷ) ಮುಗ್ದ ಮಗನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ವಕೀಲರಿಗಾಗಿ ಹುಡುಕಾಟ ನಡೆಸಿದ್ದರು. ಕೆಲವೇ ವರ್ಷಗಳ ಹಿಂದೆ ಕೋಮಲ್ ಸಿಂಗ್ ಎಂಬ ವಕೀಲರು ಅವರ ನೆರವಿಗೆ ಬಂದಿದ್ದರು.