×
Ad

ಮುಲಾಯಂ ಆಪ್ತ ಬಿಎಸ್ಪಿಗೆ ಸೇರ್ಪಡೆ

Update: 2017-01-21 14:47 IST

ಲಕ್ನೋ, ಜ.21: ಸಮಾಜವಾದಿ ಪಕ್ಷದ ಅತ್ಯಂತ ಹಿರಿಯ ಮುಖಂಡ, ಮುಲಾಯಂ ಸಿಂಗ್ ಯಾದವ್‌ರ ಆಪ್ತ ಅಂಬಿಕ ಚೌಧರಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸಮ್ಮುಖದಲ್ಲಿ ಶನಿವಾರ ಬಿಎಸ್ಪಿಗೆ ಸೇರ್ಪಡೆಯಾದರು. ಈ ಬೆಳವಣಿಗೆಯು ಆಂತರಿಕ ಬಿಕ್ಕಟ್ಟು ಎದುರಿಸುತ್ತಿರುವ ಎಸ್ಪಿಗೆ ತೀವ್ರ ಹಿನ್ನಡೆಯಾಗಿದೆ.

‘‘ನಾನು ಚೌಧರಿ ಅವರನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದೇನೆ. ಅವರಿಗೆ ಬಿಎಸ್ಪಿಯ ಎಲ್ಲ ಮಟ್ಟಗಳಲ್ಲಿ ಎಸ್ಪಿಗಿಂತ ಹೆಚ್ಚು ಗೌರವ ನೀಡಲಾಗುತ್ತದೆ. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಲಿಲಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲಾಗುತ್ತದೆ’’ ಎಂದು ಮಾಯಾವತಿ ಹೇಳಿದ್ದಾರೆ.

‘‘ನಾನು ಸಮಾಜವಾದಿ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ. ಚುನಾವಣೆಯ ಸಮಯದಲ್ಲಿ ಮುಲಾಯಂ ಸಿಂಗ್ ಯಾದವ್ ಬಣದಲ್ಲಿ ಕಲಹ ಏರ್ಪಟ್ಟಿದೆ. ಎಲ್ಲ ಸಮಸ್ಯೆಗೆ ಆಡಳಿತ ಪಕ್ಷವೇ ಜವಾಬ್ದಾರಿ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ತನ್ನನ್ನು ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ. ತಾನು ಮುಂದಿನ ದಿನಗಳಲ್ಲಿ ಬಿಎಸ್ಪಿಯನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ’’ ಎಂದು ಚೌಧರಿ ಹೇಳಿದರು.

‘‘ನಾನು ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಕಳೆದ 25 ವರ್ಷಗಳ ಕಾಲ ಸಮಾಜವಾದಿ ಪಕ್ಷದಲ್ಲಿದ್ದೆ. ಕೋಮು ಶಕ್ತಿಗಳ ವಿರುದ್ಧ ಹೋರಾಡಲು ಅವಕಾಶ ನೀಡಿರುವ ಮಾಯಾವತಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಚೌಧರಿ ಹೇಳಿದ್ದಾರೆ.

ಸಮಾಜವಾದಿ ಪಕ್ಷದೊಳಗೆ ಆಂತರಿಕ ಸಂಘರ್ಷ ಏರ್ಪಟ್ಟಾಗ ಶಿವಪಾಲ್ ಯಾದವ್ ಜೊತೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚೌಧರಿ ಶ್ರಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News