ನೋಟು ರದ್ದತಿಯಿಂದ ಖೋಟಾ ನೋಟು ಹಾವಳಿ,ಭಯೋತ್ಪಾದನೆಗೆ ಕಡಿವಾಣ ಬಿತ್ತೇ?
ಹೊಸದಿಲ್ಲಿ,ಜ.21: ಖೋಟಾ ನೋಟುಗಳ ಹಾವಳಿ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿಗೆ ತಡೆ ಹಾಕುವುದು......ಇವು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದ ನ.8ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ್ದ ಟಿವಿ ಭಾಷಣದಲ್ಲಿ ಉಲ್ಲೇಖಿಸಿದ್ದ ನೋಟು ರದ್ದತಿ ಕ್ರಮದ ಮುಖ್ಯ ಉದ್ದೇಶಗಳಲ್ಲಿ ಸೇರಿದ್ದವು. ಈ ಉದ್ದೇಶಗಳು ಈಡೇರಿವೆಯೇ ಅಥವಾ ಈಡೇರುವ ನಿರೀಕ್ಷೆಯಾದರೂ ಇದೆಯೇ? ಈ ಪ್ರಶ್ನೆಗೆ ಕೇಂದ್ರ ವಿತ್ತ ಸಚಿವಾಲಯವು ನೀಡಿರುವ ಉತ್ತರ ಮೋದಿ ಸರಿಯಾಗಿದ್ದನ್ನೇ ಮಾಡಿದ್ದಾರೆ ಎಂದು ತಿಳಿದುಕೊಂಡವರಿಗೆ ಆಘಾತವನ್ನೇ ನೀಡಿದೆ.
ನ.8 ಮತ್ತು ಡಿ.30ರ ನಡುವೆ ಭದ್ರತಾ ಸಂಸ್ಥೆಗಳು ಯಾವುದೇ ಖೋಟಾ ನೋಟನ್ನು ವಶಪಡಿಸಿಕೊಂಡಿಲ್ಲ ಎಂದು ವಿತ್ತ ಸಚಿವಾಲಯವು ಸಾರ್ವಜನಿಕ ಲೆಕ್ಕಪತ್ರ ಕುರಿತ ಸಂಸದೀಯ ಸಮಿತಿ(ಪಿಎಸಿ)ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ನ.9-ಜ.4ರ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು ಭಾರತೀಯ ಪ್ರಜೆಗಳಿಂದ ಒಟ್ಟು 474.37 ಕೋ.ರೂ.ವೌಲ್ಯದ ಹೊಸ ಮತ್ತು ಹಳೆಯ, ರದ್ದಾದ ನೋಟುಗಳನ್ನು ವಶಪಡಿಸಿ ಕೊಂಡಿದೆ. ಈ ಹಣವನ್ನು ವಶಪಡಿಸಿಕೊಳ್ಳಲಾಗಿರುವ ವ್ಯಕ್ತಿಗಳು ಭಯೋತ್ಪಾದಕ ಗುಂಪಿನವರೋ ಅಥವಾ ಕಳ್ಳ ಸಾಗಣೆದಾರರೋ ಎನ್ನುವುದು ತನಗೆ ಗೊತ್ತಿಲ್ಲ ಎಂದು ಸಚಿವಾಲಯವು ಹೇಳಿದೆ.
ಆದರೆ ಸಚಿವಾಲಯವು, 2015ರ ಎಪ್ರಿಲ್-ಡಿಸೆಂಬರ್ ಅವಧಿಗೆ ಹೋಲಿಸಿದರೆ 2016ನೇ ಸಾಲಿನ ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿರುವ ಚಿನ್ನಾಭರಣ ಇತ್ಯಾದಿ ಅಮೂಲ್ಯ ಸೊತ್ತುಗಳಲ್ಲಿ ಶೇ.100ರಷ್ಟು ಏರಿಕೆ ಮತ್ತು ಅಘೋಷಿತ ಆದಾಯದಲ್ಲಿ ಶೇ. 51ರಷ್ಟು ಏರಿಕೆಯಾಗಿದೆ ಎನ್ನುವುದನ್ನು ಒಪ್ಪಿಕೊಂಡಿದೆ. ಇದೇ ಅವಧಿಯಲ್ಲಿ ಶೋಧ ಕಾರ್ಯಾಚರಣೆಗೆ ಒಳಪಡಿಸಿದ ಗುಂಪುಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.136ರಷ್ಟು ಹೆಚ್ಚಳ ಕಂಡಿದೆ ಎಂದೂ ಅದು ತಿಳಿಸಿದೆ.
ನೋಟು ರದ್ದತಿಯನ್ನು ಘೋಷಿಸಲಾಗಿದ್ದ ನ.8ರಿಂದ ತೆರಿಗೆ ಸಂಗ್ರಹದಲ್ಲಿಯೂ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಏರಿಕೆ ಕಂಡು ಬಂದಿದೆ ಎಂದೂ ಸಚಿವಾಲಯವು ನೋಟು ನಿಷೇಧ ಕುರಿತು ಪಿಎಸಿಯ ಪ್ರಶ್ನೆಗಳಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದೆ.
ಕಂದಾಯ,ವೆಚ್ಚ,ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ವಿತ್ತ ಸಚಿವಾಲಯದ ನಾಲ್ವರು ಕಾರ್ಯದರ್ಶಿಗಳು ಫೆ.10ರಂದು ಪಿಎಸಿಯ ಮುಂದೆ ಹಾಜರಾಗುವ ನಿರೀಕ್ಷೆಯಿದೆ.
500 ಮತ್ತು 1,000 ರೂ.ನೋಟುಗಳ ರದ್ದತಿ ಮತ್ತು ಹೊಸ ಸರಣಿಯ ನೋಟುಗಳ ಬಿಡುಗಡೆಯು ಖೋಟಾ ನೋಟು, ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಕಪ್ಪುಹಣ....ಈ ಮೂರೂ ಸಮಸ್ಯೆಗಳಿಗೆ ಕಡಿವಾಣ ಹಾಕುವ ಅತ್ಯಂತ ಅಪರೂಪದ ಮತ್ತು ಘನವಾದ ಅವಕಾಶವನ್ನು ಒದಗಿಸುತ್ತದೆ ಎನ್ನುವುದು ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಭಿಪ್ರಾಯವಾಗಿದೆ ಎಂದು ಆರ್‌ಬಿಐ ಸಂಸತ್ತಿನ ಇಲಾಖಾ ಸಂಬಂಧಿತ ಹಣಕಾಸು ಸಮಿತಿಗೆ ಸಲ್ಲಿಸಿದ್ದ ಟಿಪ್ಪಣಿಯಲ್ಲಿ ತಿಳಿಸಿತ್ತು.
ಪಿಎಸಿಯ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿರುವ ಆರ್‌ಬಿಐ, ನ.8-ಡಿ.30ರ ಅವಧಿಯಲ್ಲಿ ಕೇಂದ್ರೀಯ ಅಬಕಾರಿ ಮತ್ತು ಸೀಮಾಶುಲ್ಕ ಮಂಡಳಿ ಅಧೀನದ ಸಂಸ್ಥೆಗಳು ಯಾವುದೇ ಖೋಟಾ ನೋಟನ್ನು ವಶಪಡಿಸಿಕೊಂಡಿಲ್ಲ ಎಂದು ತಿಳಿಸಿದೆ.
ನೋಟು ರದ್ದತಿ ಕ್ರಮವು ‘ಧನಾತ್ಮಕ ಪರಿಣಾಮ ’ವನ್ನು ಬೀರಿದೆ. ನಿಷ್ಕ್ರಿಯವಾಗಿದ್ದ ನಗದುಹಣ ವ್ಯವಸ್ಥೆಯೊಳಗೆ ಹರಿದು ಬರುತ್ತಿರುವುದು, ತೆರಿಗೆ ಬುನಾದಿ ಇನ್ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆ, ಬ್ಯಾಂಕುಳಿಗೆ ಹೆಚ್ಚು ಹಣದ ಲಭ್ಯತೆ, ನಗದುರಹಿತ ವಹಿವಾಟುಗಳಲ್ಲಿ ಹೆಚ್ಚಳ, ಹೆಚ್ಚಿರುವ ಪಾರದರ್ಶಕತೆ ಇತ್ಯಾದಿಗಳು ಈ ಪರಿಣಾಮದಲ್ಲಿ ಸೇರಿವೆ ಎಂದು ವಿತ್ತ ಸಚಿವಾಲಯವು ಒತ್ತಿ ಹೇಳಿದೆ.