ಒಬಾಮ ನಿರ್ಗಮನದ ಬಳಿಕ ಟ್ವಿಟರ್‌ನಲ್ಲಿ ಮೋದಿ ವಿಶ್ವಕ್ಕೇ ನಂ.1

Update: 2017-01-21 11:20 GMT

ಹೊಸದಿಲ್ಲಿ,ಜ.21: ಅಮೆರಿಕದ 44ನೇ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರದ ಗದ್ದುಗೆಯನ್ನು ಒಪ್ಪಿಸಿ ಶ್ವೇತಭವನದಿಂದ ನಿರ್ಗಮಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿರುವ ಜಾಗತಿಕ ನಾಯಕನಾಗಿ ಮೂಡಿ ಬಂದಿದ್ದಾರೆ.

  ಹಾಲಿ ಅಧಿಕಾರದಲ್ಲಿರುವ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿರುವ ಇತರ ಎಲ್ಲ ಜಾಗತಿಕ ನಾಯಕರಿಗೆ ಹೋಲಿಸಿದರೆ ಫೇಸ್‌ಬುಕ್, ಟ್ವಿಟರ್,ಯು ಟ್ಯೂಬ್ ಮತ್ತು ಗೂಗಲ್ ಪ್ಲಸ್‌ಗಳಲ್ಲಿ ಅತ್ಯಂತ ಹೆಚ್ಚಿನ ಫಾಲೋವರ್ ಗಳಿರುವದು ಮೋದಿಯವರಿಗೇ. ಅವರು ಟ್ವಿಟರ್‌ನಲ್ಲಿ 26.5 ಮಿಲಿಯನ್, ಫೇಸ್‌ಬುಕ್‌ನಲ್ಲಿ 39.2, ಗೂಗಲ್ ಪ್ಲಸ್‌ನಲ್ಲಿ 3.2, ಲಿಂಕ್ಡ್ ಇನ್‌ನಲ್ಲಿ 1.99 ಮತ್ತು ಇನಸ್ಟಾಗ್ರಾಮ್‌ನಲ್ಲಿ 5.8 ಮಿಲಿಯನ್ ಹಾಗೂ ಯು ಟ್ಯೂಬ್‌ನಲ್ಲಿ 5,91,000 ಫಾಲೋವರ್‌ಗಳನ್ನು ಹೊಂದಿದ್ದಾರೆ.

ತನ್ನ ಡಿಜಿಟಲ್ ಇಂಡಿಯಾ ಅಭಿಯಾನದಡಿ ಜನರೊಂದಿಗೆ ಸಂಪರ್ಕ ಹೊಂದಲು ತಾನು ಸೃಷ್ಟಿಸಿರುವ ಆ್ಯಪ್ ಮತ್ತು ಭಾರತದಲ್ಲಿ ಸ್ಮಾರ್ಟ್ ಫೋನ್ ಕ್ರಾಂತಿಗೆ ಅವರು ನೀಡಿದ್ದ ಹೆಚ್ಚಿನ ಒತ್ತು ಮೋದಿಯವರ ಫಾಲೋವರ್‌ಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಗಣನೀಯ ಕೊಡುಗೆಯನ್ನು ಸಲ್ಲಿಸಿವೆ.

ಆದರೆ ಟ್ವಿಟರ್‌ನಲ್ಲಿ 20.9 ಮಿ.ಫಾಲೋವರ್‌ಗಳೊಂದಿಗೆ ಟ್ರಂಪ್ ಮೋದಿಯವರ ಬೆನ್ನಿಗೇ ಇದ್ದಾರೆ. ನಂತರದ ಸ್ಥಾನಗಳಲ್ಲಿ ಪ್ರಧಾನಿ ಕಚೇರಿ (15.5ಮಿ.) ಮತ್ತು ಪೋಟಸ್(ಪ್ರೆಸಿಡೆಂಟ್ ಆಫ್ ಯುನೈಟೆಡ್ ಸ್ಟೇಟ್ಸ್) ಖಾತೆ ಇವೆ. ಇದಾದ ಬಳಿಕ ವೈಟ್ ಹೌಸ್(13.4ಮಿ.), ದಲಾಯಿ ಲಾಮಾ(13.1 ಮಿ.) ಮತ್ತು ಪೋಪ್(12.5 ಮಿ.) ಸ್ಥಾನಗಳನ್ನು ಪಡೆದಿದ್ದಾರೆ.

ಆದರೆ ಈ ನಾಯಕರು ಫಾಲೋ ಮಾಡುತ್ತಿರುವ ಖಾತೆಗಳ ಸಂಖ್ಯೆ ಆಸಕ್ತಿದಾಯಕ ವಾಗಿದೆ. ಟ್ರಂಪ್ ಕೇವಲ 42 ಖಾತೆಗಳನ್ನು ಮತ್ತು ಮೋದಿ 1,641 ಖಾತೆಗಳನ್ನು ಫಾಲೋ ಮಾಡುತ್ತಿದ್ದರೆ, ಒಬಾಮ ಅವರ ಟ್ವಿಟರ್ ಹ್ಯಾಂಡಲ್ 6,31,987 ಖಾತೆಗಳನ್ನು ಫಾಲೋ ಮಾಡುತ್ತಿದೆ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News